ಅರಣ್ಯದಂಚಿನ ರೈತರನ್ನು ಒಕ್ಕಲೆಬ್ಬಿಸಬೇಡಿ

16 bangarpete 1
ಬಂಗಾರಪೇಟೆ ತಾಲೂಕಿನ ಹರಟಿ ಗ್ರಾಮದಲ್ಲಿ ಆಯೋಜಿಸಿದ್ದ ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಎಸ್​.ಎನ್​.ನಾರಾಯಣಸ್ವಾಮಿ, ಕಾಂಗ್ರೆಸ್​ ಮುಖಂಡ ಕೆ.ಚಂದ್ರಾರೆಡ್ಡಿ, ಧರ್ಮಸ್ಥಳ ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ, ಗ್ರಾಪಂ ಅಧ್ಯಕ್ಷ ವೆಂಕಟೇಶ್​ ಇದ್ದರು.
Published on

ಅಧಿಕಾರಿಗಳಿಗೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸೂಚನೆ - ಹರಟಿಯಲ್ಲಿ ಕೆರೆ ಹಸ್ತಾಂತರ

ಬಂಗಾರಪೇಟೆ : ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಂಟಿ ಸರ್ವೇ ಮುಗಿಯುವವರೆಗೂ ಅರಣ್ಯ ವ್ಯಾಪ್ತಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಯಾವುದೇ ತೊಂದರೆ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸೂಚಿಸಿದರು.

ತಾಲೂಕಿನ ಹರಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ವ್ಯಾಪ್ತಿಯಲ್ಲಿನ ಗೋಮಾಳವು ಸಹ ಸಾರ್ವಜನಿಕರದ್ದು. ಅರಣ್ಯ ಇಲ್ಲದ ಜಾಗವನ್ನು ಸರ್ವೇ ಮೂಲಕ ಗುರುತಿಸಿ ಆ ಪ್ರದೇಶ ಅರಣ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಜಿಲ್ಲಾ ಕೆಡಿಪಿ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಆ ನಂತರ ಸಭೆ ಮುಖಾಂತರ ವರದಿಯನ್ನು ಶಿಫಾರಸು ಮಾಡಿ ಸರ್ಕಾರದ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಸರ್ಕಾರದ ನಿರ್ದೇಶನ ಬರುವವರೆಗೂ ಅಂತಹ ಜಮೀನುಗಳ ರೈತರು ಆತಂಕ ಪಡಬೇಕಾಗಿಲ್ಲ. ರೈತರ ಪರವಾಗಿ ಸರ್ಕಾರದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲು ಸಿದ್ಧನಾಗಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳು ಏನಾದರು ಠಾಣೆಗೆ ದೂರು ನೀಡಿದರೆ ಕ್ರಮ ತೆಗೆದುಕೊಳ್ಳದಂತೆ ಎಸ್ಪಿ ಅವರ ಗಮನಕ್ಕೆ ತರಲಾಗುವುದು ಎಂದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಿಂದ ಕೆರೆಗಳ ಪುನಶ್ಚೇತನ ಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಜಿಲ್ಲೆಯಲ್ಲಿ ರೈತರಿಗೆ, ನಾಗರಿಕರಿಗೆ ಕೆರೆಗಳೇ ಆಶ್ರಯವಾಗಿದೆ. ಮಳೆ ನೀರು ಕೆರೆಗಳಲ್ಲಿ ತುಂಬಿದರೆ ಮಾತ್ರ ಅಂತರ್ಜಲ ವೃದ್ಧಿಯಾಗುತ್ತದೆ. ಹಾಗಾಗಿ ಕೆರೆಗಳಲ್ಲಿ ತುಂಬಿರುವ ಊಳನ್ನು ತೆರುವುಗೊಳಿಸಿ ಅಭಿವೃದ್ಧಿ ಕೈಗೆತ್ತಿಕೊಂಡಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಮಲ್ಲಂಡೂರ್​ ರಸ್ತೆ ಡಾಂಬರೀಕರಣ, ಮೇಲ್ಕಂಡ ಹಳ್ಳಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಭವನ ನಿಮಾರ್ಣ, ಹರಟಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಅಗತ್ಯ ಇರುವ ಸ್ಥಳಗಳಲ್ಲಿ 10ರಿಂದ 15 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್​ ರಸ್ತೆ, ಹರಟಿ ಬಂಗಾರಪೇಟೆ ರಸ್ತೆ ಅಭಿವೃದ್ಧಿಗೆ 9 ಕೋಟಿ ರೂ., ಪಟ್ನಾ ಗ್ರಾಮದ ಸಮೀಪ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕ್ರಮ ವಹಿಸಲಾಗಿದೆ ಎಂದರು.

ಪಿಡಿಒ ನಾಗರಾಜು, ಎನ್​ವಿ ಕೆರೆ ಸಮಿತಿ ಅಧ್ಯಕ್ಷ ನರೇಂದ್ರಬಾಬು, ಸಮಿತಿ ನಿರ್ದೇಶಕ ಶಿದಾನಂದ ಆಚಾರ್ಯ, ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಸಿ. ನಾರಾಯಣಪ್ಪ, ಮಂಜುಳಾ ಸುಬ್ರಮಣ್ಯ, ಸಮಿತಿ ಕೆರೆ ಅಭಿಯಂತರ ಭರತ್​, ಟಿ.ಎಸ್​.ಸಿದ್ದಗಂಗಯ್ಯ ಇದ್ದರು.

ಕೋಲಾರ ಒಕ್ಕೂಟಕ್ಕೆ ಈ ಭಾಗದಿಂದ ವಡಗೂರ್​ ಹರೀಶ್​ ಅವರು ಗೆದ್ದಿದ್ದು, ಅವರ ಜತೆ ಸೇರಿ ಹಾಲು ಒಕ್ಕೂಟದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡಲಾಗುವುದು. - ಎಸ್​.ಎನ್​.ನಾರಾಯಣಸ್ವಾಮಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net