ಮಕ್ಕಳಿಗೆ ಮದುವೆ ಮಾಡಿ ವಿದ್ಯಾಭ್ಯಾಸ ಮೊಟಕುಗೊಳಿಸಬೇಡಿ

12
ಹೊಳೆನರಸೀಪುರ ಸೋಸಿಯಲ್ ಕ್ಲಬ್ ವತಿಯಿಂದ ಬುಧವಾರ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಗಳ 18 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು. ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ. ಬಿಇಒ ಸೋಮಲಿಂಗೇಗೌಡ, ಪ್ರಾಂಶುಪಾಲ ದೇವರಾಜ್, ಪಂಕಜಾ, ರವಿ ಇದ್ದರು.
Published on

ಹೊಳೆನರಸೀಪುರ: ಗ್ರಾಮೀಣ ಭಾಗದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಹೆಚ್ಚು ಪ್ರತಿಭಾವಂತ ಹಾಗೂ ಆತ್ಮವಿಶ್ವಾಸದವರಾಗಿರುತ್ತಾರೆ. ಉತ್ತಮವಾಗಿ ವ್ಯಾಸಂಗ ಮಾಡುತ್ತಾ ಉನ್ನತ ವಿದ್ಯಾಭ್ಯಾಸದ ಕನಸನ್ನೂ ಕಟ್ಟಿಕೊಂಡಿರುತ್ತಾರೆ. ಆದರೆ ಪಾಲಕರು ಅವರ ಆಸೆಯನ್ನು ಮೊಟಕುಗೊಳಿಸಿ ಮದುವೆ ಮಾಡಿ ಕಳಿಸಿ ಅವರ ಕನಸನ್ನು ಕಮರುವಂತೆ ಮಾಡುತ್ತಾರೆ ಎಂದು ಮಳಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಂಕಜಾ ಬೇಸರಿಸಿದರು.

ಪಟ್ಟಣದ ಸೋಸಿಯಲ್ ಕ್ಲಬ್ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಇಂದಿನ ದಿನದಲ್ಲಿ ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗ ಪಡೆದುಕೊಳ್ಳಲು ಅವಕಾಶ ಮಾಡಿಕೊಡಿ. ಒಳ್ಳೆಯ ವಿದ್ಯೆ ಇದ್ದರೆ ನಮಗೆ ಬೇಕಾದಂತಹ ವರನನ್ನೇ ಹುಡುಕಿ ಮದುವೆ ಮಾಡಬಹುದು. ಮದುವೆ ಮಾಡುವ ಆತುರ ಬೇಡ ಎಂದರು.

ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರವಿ ಮಾತನಾಡಿ, ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಮುಂದೆ ಉತ್ತಮ ಫಲ ಕೊಟ್ಟೇ ಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ. ವಿದ್ಯಾಭ್ಯಾಸದ ನಂತರ ನಮಗೆ ಒಳ್ಳೆಯ ಉದ್ಯೋಗ ದೊರಕಿಸಿಕೊಳ್ಳಲು ಸಾಧ್ಯ ಆಗದಿದ್ದರೆ ನಾವು ವಿದ್ಯಾಭ್ಯಾಸವನ್ನು ಪರಿಪೂರ್ಣವಾಗಿ ಮಾಡಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ. ಆದ್ದರಿಂದ ಮುಂದೇ ನಿವೇನಾಗಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡು ಅದಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮಾಡಿ ಹೆಚ್ಚಿನ ಅಂಕ ತೆಗೆದು ಉತ್ತಮ ಕೆಲಸ ಗಿಟ್ಟಿಸಿಕೊಂಡು ನಿಮ್ಮ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಮಾತನಾಡಿ, ಉತ್ತಮ ವಿದ್ಯೆ ಮತ್ತು ಸಾಮಾಜಿಕ ಜ್ಞಾನ ಚೆನ್ನಾಗಿದ್ದರೆ ನಾವು ಅಂದುಕೊಂಡ ಯಾವುದೇ ಸಾಧನೆಯನ್ನಾದರೂ ಮಾಡಬಹುದು. ಉತ್ತಮ ಸಾಧನೆ ಮಾಡಲು ಬೇಕಾದ ಎಲ್ಲ ಜ್ಞಾನವನ್ನು ಸಂಪಾದಿಸಿ ಎಂದರು.

ಪ್ರಾಂಶುಪಾಲ ದೇವರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿ ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ. ನೀವು ಉತ್ತಮ ಅಂಕ ತೆಗೆದು ಇಂದು ಸನ್ಮಾನಕ್ಕೆ ಪಾತ್ರರಾಗಿದ್ದೀರಿ. ಇನ್ನೂ ಹೆಚ್ಚಿನ ಸಾಧನೆ ಮಾಡಿ ಎಂದರು.

ಕ್ಲಬ್ ಅಧ್ಯಕ್ಷ ಕೆ.ಎಂ. ಹೊನ್ನಪ್ಪ 18 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ನಗದು ಹಾಗೂ ಪ್ರಶಂಶಾ ಪತ್ರ ನೀಡಿ ಗೌರವಿಸಿದರು. ಮಾಜಿ ಅಧ್ಯಕ್ಷ ಪದ್ಮರಾಜು ವೇದಿಕೆಯಲ್ಲಿದ್ದರು. ಶಂಕರ್ ನಾರಾಯಣ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net