

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ದೇಶ ಬಿಟ್ಟು ಗಾಂಧಿಯಿಲ್ಲ, ಗಾಂಧಿ ಬಿಟ್ಟು ಭಾರತವಿಲ್ಲ ಎಂಬುದನ್ನು ಎಲ್ಲರು ಅರಿತುಕೊಳ್ಳುವ ಅಗತ್ಯವಿದೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿದರು.
ಆಳ್ವಾಸ್(ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗ, ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆದ ‘ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು’ ಎರಡು ದಿನಗಳ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಂತಿಯುತವಾಗಿ ಸ್ವಾತಂತ್ರೃ ತಂದುಕೊಟ್ಟು, ನೈತಿಕತೆಯ ಉತ್ತುಂಗದಲ್ಲಿ ಬದುಕಿ ಬಾಳಿದ ಕೀರ್ತಿ ಗಾಂಧಿಯವರಿಗೆ ಸಲ್ಲುತ್ತದೆ. ಗಾಂಧೀಜಿ ಅವರ ಬಗ್ಗೆ ಅಧಿಕೃತ ಸಾಹಿತ್ಯ ಓದಿ ಅರ್ಥೈಸಿಕೊಂಡು ನಂತರ ಪ್ರಶ್ನಿಸಿ. ಆದರೆ ಗೊತ್ತಿಲ್ಲದೇ ಟೀಕಿಸಬೇಡಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಗಾಂಧೀಜಿ ಕುರಿತ ಅಪಾರ ಗೌರವ, ಚಿಂತನ ಮಂಥನ, ವಿಚಾರಧಾರೆಗಳು ಇನ್ನಷ್ಟು ಹೆಚ್ಚಾಗಬೇಕು. ಜಗತ್ತಿನ ಯಾವುದೇ ದೇಶದಲ್ಲೂ ಇಂತಹ ಮಹಾತ್ಮರು ಸಿಗಲು ಸಾಧ್ಯವಿಲ್ಲ. ಆದ್ದರಿಂದ ಗಾಂಧೀಜಿಯ ಕುರಿತ ಅಧ್ಯಯನ, ವಿಚಾರ, ವಿಶ್ಲೇಷಣೆ ಮುಂದಿನ ಪೀಳಿಗೆಗೆ ತಲುಪುವಂತಾಗಬೇಕು ಎಂದರು.
ಕವಯಿತ್ರಿ ಸವಿತಾ ನಾಗಭೂಷಣ, ಅಧ್ಯಾಪಕ, ಲೇಖಕ ಅರವಿಂದ ಚೊಕ್ಕಾಡಿ, ಯೂನಿವರ್ಸಿಟಿ ಆಫ್ ಆಕ್ಸ್‌ಫರ್ಡ್‌ನ ಸ್ಕಾಲರ್ ಡಾ.ಸುಮನಸ್ ಕೌಲಗಿ, ಡಾ.ವಿಷ್ಣುಮೂರ್ತಿ ಪ್ರಭು, ಅಜ್ಜರಕಾಡು ಉಡುಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಸಹ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಆಳ್ವಾಸ್(ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಮತ್ತಿತರರಿದ್ದರು.
ಸಂಘಟನಾ ಕಾರ್ಯದರ್ಶಿ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿದರು. ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಕೃಷ್ಣರಾಜ್ ಕರಬ, ಹರೀಶ್ ಟಿ.ಜಿ., ವಿದ್ಯಾರ್ಥಿನಿ ಮಾಧವಿ ಎನ್.ಎಸ್. ಕಾರ‌್ಯಕ್ರಮ ನಿರೂಪಿಸಿದರು.