ಮಕ್ಕಳಲ್ಲಿ ಭಯ ನಿರ್ಮಾಣ ಮಾಡದಿರಿ

3 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳಲ್ಲಿ ಭಯ ನಿರ್ಮಾಣ ಮಾಡಿದರೆ ಮುಂದೆ ಅವರು ಏನನ್ನು ಸಾಧಿಸದ ಅಸಮರ್ಥರಾಗುತ್ತಾರೆ. ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡದಿರುವುದು ಖೇದಕರ ಸಂಗತಿ ಎಂದು ಕಿರೇಸೂರಿನ ಸರಕಾರಿ ಪ್ರೌಢ ಶಾಲೆಯ ಡಾ. ಲಿಂಗರಾಜ ರಾಮಾಪುರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ರಾಮಚಂದ್ರ ಪಾಟೀಲ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ರಂಗಕಲೆ ಪಾತ್ರ ಕುರಿತು ಮಾತನಾಡಿದರು.

ನಾಟಕ ಪ್ರದರ್ಶನಕ್ಕಿಂತ ಮೊದಲು ತಾಲೀಮು ಮಾಡುವಾಗ ಹಲವಾರು ಮೌಲಿಕ ಗುಣ ಕಲಿಯುತ್ತಾರೆ. ಶಿಕ್ಷಕರಿಗೆ ರಂಗಕಲೆ ಇರಬೇಕು. ಆದರೆ ಅದು ಆಗದೆ ಶುಷ್ಕ ಕಲಿಕೆ ನಡೆಯುತ್ತಿದೆ. ಶಿಕ್ಷಣದ ಮಾಧ್ಯಮವಾಗಿ ರಂಗಕಲೆ ಪ್ರಭಾವಿಯಾಗಿ ಕಾರ್ಯ ಮಾಡುತ್ತದೆ. ರಂಗಭೂಮಿ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಲು ಸಾಧ್ಯವಿದೆ. ಇಂತಹ ಕಲೆಯನ್ನು ಮಕ್ಕಳ ಮೂಲಕ ಉಳಿಸಿ ಬೆಳೆಸಬೇಕಾಗಿದೆ. ನಾಟಕ ಪ್ರದರ್ಶನ ಮಾಡುವ ಕಲೆ ಗೊತ್ತಿದ್ದವರು ಒಳ್ಳೆ ನಾಟಕ ರಚಿಸಬಲ್ಲರು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ.ಎಂ. ಚಿಕ್ಕಮಠ ಮಾತನಾಡಿ, ರಾಮಚಂದ್ರ ಪಾಟೀಲರು ಶೈಕ್ಷಣಿಕ ಚಿಂತನೆ ಜತೆಗೆ ಹಾಸ್ಯ ಪ್ರಿಯರಾಗಿದ್ದರು. ಆಕಾಶವಾಣಿಯ ಅಧಿಕೃತ ಕವಿಯಾಗಿ ಕವಿತೆಗಳನ್ನು ನೀಡಿದವರು. ನಾಟಕದ ಮೂಲಕ ಒಂದೆರಡು ತಾಸಿನಲ್ಲಿ ನೀಡುವ ಸಂದೇಶ ತುಂಬಾ ಪ್ರಭಾವ ಮಾಡುವ ಶಕ್ತಿ ಹೊಂದಿದೆ. ಎಲ್ಲ ಲಲಿತ ಕಲೆಗಳು ಸೇರಿದ ಕಲೆ ರಂಗಭೂಮಿಯಾಗಿದೆ. ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಸುವುದೊಂದೇ ಕಾರ್ಯ ಎನ್ನುವಂತಾಗಿ, ಲಲಿತ ಕಲೆಗಳು ಗೌನವಾಗಿವೆ. ಲಲಿತಕಲೆಗಳಿಗೆ ಪ್ರೋತ್ಸಾಹ ನೀಡಿದ ಶಿಕ್ಷಕರನ್ನು ಎಂದು ಮರೆಯಲಾರರು ಎಂದರು.

ದತ್ತಿ ದಾನಿ ಪರ ಶಿಕ್ಷಕಿ ಶಾರದಾ ನಾಗರಾಜ ಕೆರಕಲಮಟ್ಟಿ, ಭಾರತಿ ಸಂಜೀವ ಸೋಮರಡ್ಡಿ, ಭೀಮಪ್ಪ ವಿ.ಎಸ್​, ಆರ್​.ಬಿ. ತಿಮ್ಮಾಪುರ, ಮಹಾಂತೇಶ ನರೆಗಲ್ಲ, ಇತರರು ಇದ್ದರು.

ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಕೆ.ಎಚ್​. ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net