

ಅರಸೀಕೆರೆ : ಮನುಕುಲದ ಭವಿಷ್ಯದ ದೃಷ್ಟಿಯಿಂದ ಪರಿಸರ ಸಂರಕ್ಷಿಸಲು ಮೊದಲ ಆದ್ಯತೆ ನೀಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಗೀತಾ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ವಿಜ್ಞಾನ ಕೇಂದ್ರ ಹಾಗೂ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟ ಬಳಿಕ ಮಾತನಾಡಿದರು. ಮನುಷ್ಯ ವೈಯಕ್ತಿಕ ಸ್ವಾರ್ಥ ತೊರೆದು ಪರಿಸರದೊಂದಿಗೆ ಸಂಘರ್ಷಕ್ಕಿಳಿಯದೆ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತವಾದ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಪರಿಸರವೆಂದರೆ ಮರ, ಗಿಡ, ನೀರು ಮಣ್ಣು, ಕಲ್ಲು, ಪ್ರಾಣಿ, ಪಕ್ಷಿ ವಾತಾವರಣ ಹಾಗೂ ಎಲ್ಲ ಜೀವ ಜಂತುಗಳನ್ನು ಒಳಗೊಂಡಿದೆ. ವಿದ್ಯಾರ್ಥಿ ಸಮುದಾಯ, ಕೈಗಾರಿಕೋದ್ಯಮಿಗಳಲ್ಲಿ ಹಾಗೂ ಪ್ರತಿಯೊಬ್ಬ ನಾಗರಿಕರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಸರದಿನದ ಆಚರಣೆ ಪೂರಕವಾಗಿದೆ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯಕೆ.ಸಿ.ನಟರಾಜ್ ಮಾತನಾಡಿ, ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ ಪಡೆಯಬಹುದು. ಪರಿಸರ ದಿನದಂದು ಗಿಡ ನೆಡುವುದಷ್ಟೇ ಮುಖ್ಯವಲ್ಲ. ಬದಲಾಗಿ ನೀರುಣಿಸಿ ಬೆಳೆಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಹಾಗೂ ಸಂಶೋಧಕ ಹನುಮಾ ನಾಯಕ್ ಮಾತನಾಡಿ, ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಮರ, ಗಿಡ, ಗೋಮಾಳ, ಗುಂಡು ತೋಪು, ಕೆರೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಣೆ ಮಾಡುವ ಪರಂಪರೆಯನ್ನು ಪೂರ್ವಿಕರು ಮುಂದುವರಿಸಿದ್ದರು. ತನ್ಮೂಲಕ ಸಕಲ ಜೀವರಾಶಿಗಳ ಉಳಿವಿಗೆ ಪೋಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವ ಕೆಲಸ ನಡೆಯುತ್ತಿತ್ತು ಅಂತಹ ಕೆರೆ ಕಟ್ಟೆ ತೋಪುಗಳನ್ನು ಸರ್ಕಾರಗಳು ಇಂದು ಕ್ರಮ ವಹಿಸಿ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸದಸ್ಯ ಯುವರಾಜ್, ಪರಿಸರವಾದಿ ಲಿಂಗರಾಜ್ ಮಾತನಾಡಿದರು. ಸಮಾಜಸೇವಕ ಕುಮಾರಣ್ಣ ಪರಿಸರ ಗೀತೆ ಹಾಡಿದರು. ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ರಾಜೇಶ್ ಖನ್ನಾ ಡಾ. ಹರೀಶ್ ಕುಮಾರ್, ರಾಘವೇಂದ್ರ ಭಜಂತ್ರಿ, ಮೋಹನ್ ರಾಜ್, ಹರೀಶ್ ಕುಮಾರ್ ಎಲ್ ಸಂತೋಷ್ ಉಮಾಶಂಕರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅರಳಿ, ಹಿಪ್ಪೆ, ಬೆಟ್ಟದನೆಲ್ಲಿ, ನೇರಳೆ, ಹಲಸು ಮುಂತಾದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.