

ಹುಬ್ಬಳ್ಳಿ : ಗೋಪಾಲ್ ಜೋಶಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರು ವಿನಾಕಾರಣ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಟೆಂಗಿನಕಾಯಿ, ಕಾಂಗ್ರೆಸ್ ಪಕ್ಷ ಕೇಂದ್ರ ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.
ಪ್ರಲ್ಹಾದ ಜೋಶಿ ಅವರ ಕುಟುಂಬ ಕಳೆದ 30 ವರ್ಷಗಳಿಂದಲೂ ಪ್ರತ್ಯೇಕವಾಗಿದೆ. ಅಲ್ಲದೇ, ‘ಸಹೋದರರೊಂದಿಗೆ ತಮ್ಮಆರ್ಥಿಕ, ಕೌಟುಂಬಿಕ ವ್ಯವಹಾರವೂ ಇಲ್ಲ. ಯಾರಾದರೂ ನನ್ನ ಹೆಸರು ದುರ್ಬಳಕೆಗೆ ಯತ್ನಿಸಿದರೆ ಅದಕ್ಕೂ ತಮಗೂ ಸಂಬಂಧವಿಲ್ಲ. ನಾನು ಬಾಧ್ಯಸ್ತನಲ್ಲ ಎಂಬ ಮಾಹಿತಿಯನ್ನು 2012ರಲ್ಲೇ ಸಚಿವರು ಕೋರ್ಟ್ ಅಫಿಡವಿಟ್ ಮೂಲಕ ಪ್ರಕಟಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಗೋಪಾಲ್ ಜೋಶಿ ಪ್ರಕರಣಕ್ಕೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ. ಗೋಪಾಲ್ ಜೋಶಿ ಅವರು ತಪ್ಪೆಸಗಿದ್ದರೆ ಸರ್ಕಾರ ಸಮರ್ಪಕ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಿ. ಇದರ ಹೊರತು ಅನಗತ್ಯವಾಗಿ ಪ್ರಲ್ಹಾದ ಜೋಶಿ ಅವರ ಹೆಸರು ಕೇಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಬಾರದು ಎಂದು ಆಗ್ರಹಿಸಿದರು.
ಗೋಪಾಲ್ ಜೋಶಿ ಅವರ ಮೇಲಿನ ಆರೋಪದಲ್ಲಿ ಏನಾದರೂ ಸಾಕ್ಷಧಾರಗಳಿದ್ದಾರೆ ಕಾನೂನು ತನ್ನ ಕ್ರಮ ಕೈಗೊಳ್ಳಲಿ. ಇದಕ್ಕೆ ಕೇಂದ್ರ ಸಚಿವರ ವಿರೋಧವೂ ಇಲ್ಲ, ತಮ್ಮದೂ ತಕರಾರಿಲ್ಲ. ಆದರೆ, ಅನಗತ್ಯವಾಗಿ ಪ್ರಲ್ಹಾದ ಜೋಶಿ ಅವರ ಹೆಸರು ಎಳೆದು ತರುವುದನ್ನು ಸಹಿಸುವುದಿಲ್ಲ ಎಂದು ಶಾಸಕ ಟೆಂಗಿನಕಾಯಿ ಎಚ್ಚರಿಸಿದರು.