

ಕಾರವಾರ:ಎಂಪಿ ಸೀಟು, ಮಂತ್ರಿ ಪಟ್ಟದ ಆಸೆ ಇಟ್ಟುಕೊಂಡು ಬರಬೇಡಿ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರರಿಗೆ ಹೇಳಿದ್ದೇನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಬುಧವಾರ ಮಾತನಾಡಿದ ಅವರು, ಶಿವರಾಮ ಹೆಬ್ಬಾರ ಕಾಂಗ್ರೆಸ್ ಸೇರುವುದು ಖಚಿತವಾಗಿದೆ ಎಂಬ ಮುನ್ಸೂಚನೆ ನೀಡಿದರು.
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಈಗಿರುವ ಪಕ್ಷದಲ್ಲಿ ಕಷ್ಟಪಡುತ್ತಿದ್ದಾರೆ. ಅವರ ಕಷ್ಟ ನೋಡಲಾಗುತ್ತಿಲ್ಲ. ಅವರು ತಮ್ಮ ಮನೆಗೆ ಮರಳುತ್ತಿದ್ದಾರೆ. ಕಾಂಗ್ರೆಸ್‌ಗೆ ಬರುವುದಾಗಿ ಹೇಳುತ್ತಿದ್ದಾರೆ.
ಇದನ್ನೂ ಓದಿ:ಜಿಎಸ್ಟಿ ನಕಲಿ ಬಿಲ್ ತಯಾರಕರ ಜಾಲಪತ್ತೆ
ಬರುವವರನ್ನು ನಾವು ಬೇಡ ಎನ್ನಲು ಸಾಧ್ಯವಿಲ್ಲ. ಸ್ವಾಗತಿಸುತ್ತೇವೆ ಎಂದರು. ಕಾಂಗ್ರೆಸ್‌ನಲ್ಲಿ ಉತ್ತರ ಕನ್ನಡದಲ್ಲಿ ಎಂಪಿ ಅಭ್ಯರ್ಥಿಯಾಗುವ 10 ಆಕಾಂಕ್ಷಿಗಳಿದ್ದಾರೆ. ಯಾರೇ ನಿಂತರೂ ಕಾಂಗ್ರೆಸ್ ಪಕ್ಷವೇ ಗೆದ್ದು ಬರಲಿದೆ ಎಂದರು.
ಮೋದಿಯವರನ್ನು ಅಭಿನಂದಿಸುತ್ತೇನೆ:
ನರೇಂದ್ರ ಮೋದಿ ಅವರು ಪ್ರಧಾನಿಯಾಗುವಾಗ ಅಡುಗೆ ಸಿಲಿಂಡರ್ ಬೆಲೆ 450 ರೂ. ಇತ್ತು ಈಗ 1200 ರೂ. ಆಗಿದೆ. ಅವರು ಈಗ ಚುನಾವಣೆಗಾಗಿ ಅಡುಗೆ ಅನಿಲ ಬೆಲೆಯನ್ನು ತಲಾ 200 ರೂ. ಇಳಿಸಿದ್ದಾರೆ. ಚುನಾವಣೆ ಮುಗಿದ ತಕ್ಷಣ ಮತ್ತೆ 500 ರೂ. ಏರಿಸುತ್ತಾರೆ. ಅವರು ಸಿಲಿಂಡರ್ ಬೆಲೆಯನ್ನು 450 ರೂ.ಗೆ ಇಳಿಸಿದ್ದೇ ಆದರೆ ನಾನದನ್ನು ಸ್ವಾಗತಿಸುತ್ತೇನೆ ಎಂದರು. ಬಿಜೆಪಿಯವರು ಯಾವತ್ತೂ ಸತ್ಯ ಹೇಳಿದ್ದಿಲ್ಲ. ನೀಡಿದ ಭರವಸೆಯನ್ನು ಈಡೇರಿಸಿದ್ದಿಲ್ಲ. ನೀವು ಅವರನ್ನು ನಂಬಬೇಡಿಕ ಎಂದು ನಾನು ಜನರಲ್ಲಿ ಕೇಳಿಕೊಳ್ಳುತ್ತೇನೆ ಎಂದರು. ಶಾಸಕ ಸತೀಶ ಸೈಲ್ ಜತೆಗಿದ್ದರು.