

ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದ ಮೂವರು ಅಭಿಮಾನಿಗಳ ಕುಟುಂಬಗಳ ಮನೆಗೆ ನಟ ಯಶ್ ಸೋಮವಾರ ಸಂಜೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೊದಲು ಮೃತ ಮುರಳಿ ನಡುವಿನಮನಿ ಅವರ ಮನೆಗೆ ಭೇಟಿ ನೀಡಿದ ಯಶ್ ಕುಟುಂಬದವರಿಗೆ ಸಮಾಧಾನ ಹೇಳಿದರು. ಬಳಿಕ, ನವೀನ ನೀಲಪ್ಪ ಹರಿಜನ ಹಾಗೂ ಹನುಮಂತ ಮಜ್ಜೂರಪ್ಪ ಹರಿಜನ ಅವರ ಮನೆಗೆ ಭೇಟಿ ನೀಡಿದರು.
ಈ ವೇಳೆ ಮಕ್ಕಳನ್ನು ಕಳೆದುಕೊಂಡು ಗೋಳಾಡಿದ ಕುಟುಂಬಸ್ಥರನ್ನು ಕಂಡು ಯಶ್ ಭಾವುಕರಾದರು. ಮೂವರು ಅಭಿಮಾನಿಗಳ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ‘ಮಕ್ಕಳ ಮೇಲೆ ಪಾಲಕರು ಅಗಾಧ ಕನಸು ಕಂಡಿದ್ದೆವು. ದುರಂತದಲ್ಲಿ ಮರಣ ಹೊಂದಿದ ಮಕ್ಕಳನ್ನು ನೆನೆದು ಆಕಾಶವೇ ಕಳಚಿ ಬಿದ್ದಂತಾಗಿದೆ’ ಎಂದು ಪಾಲಕರು ಗೋಳಿಟ್ಟರು. ಇದನ್ನು ಕಂಡು ನಟ ಯಶ್ ಭಾವುಕರಾದರು. ಪಾಲಕರು ಮಾತು ಕೇಳಿದ ಯಶ್ ಕಣ್ಣಂಚಿನಲ್ಲಿ ನೀರು ಜಿನುಗಿತು.
ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಯಶ್, ‘ಬರ್ತಡೇ ಆಚರಿಸಬೇಡಿ ಎಂದರೆ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಅಭಿಮಾನಿಗಳು ಖುಷಿಯಾಗಿದ್ರೆ ಅದೇ ನಮಗೆ ಸಂತೋಷ. ಇನ್ನುಮುಂದೆ ಯಾರೂ ಬ್ಯಾನರ್ ಕಟ್ಟಬೇಡಿ. ಬ್ಯಾನರ್ ಕಟ್ಟುವುದು, ನಮ್ಮ ಕಾರನ್ನು ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರೋದು ಸರಿಯಲ್ಲ. ಈ ರೀತಿಯ ಅಭಿಮಾನ ತೋರಿಸುವ ರೀತಿ ಬಿಟ್ಟು ಬಿಡಿ. ನೀವು ಒಳ್ಳೆಯ ಕೆಲಸ ಮಾಡಿ. ಅದೆ ನಮಗೆ ನಮಗೆ ನೀಡುವ ಗೌರವ ಎಂದರು.
ಗ್ರಾಮದಲ್ಲಿ ಮೃತ ಯುವಕರ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ಬೇಡ.ಅದೆಲ್ಲ ಯಾಕೆ ಎಂದಷ್ಟೇ ಹೇಳಿದರು.