

ಹುಬ್ಬಳ್ಳಿ: ಬಡವರು, ಕೂಲಿ ಕಾರ್ಮಿಕರು ಹಾಗೂ ಸ್ಲಂ ಜನರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ಜನ ವಿರೋಧಿ ಕ್ರಮ ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಹುಬ್ಬಳ್ಳಿ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ನೇತೃತ್ವದಲ್ಲಿ ನಗರದ ಮಿನಿವಿಧಾನಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ರಾಜ್ಯಾದ್ಯಂತ 8ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಬಡವರು ಬೀದಿಗೆ ಬಿದ್ದಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್‌ನವರು ಪಂಚ ಗ್ಯಾರಂಟಿಗಳ ಮೂಲಕ ಬಡವರು, ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದಾದ ಮೇಲೆ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಮೂಲಕ ಕೂಲಿಕಾರ್ಮಿಕರು, ಸ್ಲಂ ನಿವಾಸಿಗಳು, ಬಡವರಿಗೆ ಅನ್ಯಾಯವಾಗುತ್ತಿದೆ.
ಉಳ್ಳವರ ಕಾರ್ಡ್‌ಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಬೇಕು. ಆದರೆ, ಅಧಿಕಾರಿಗಳು ಯಾವುದೇ ಸಮೀಕ್ಷೆ ನಡೆಸದೆ ಮುಂಚಿತವಾಗಿ ಫಲಾನುಭವಿಗಳಿಗೆ ನೋಟಿಸ್ ನೀಡದೆ ಪಡಿತರ ಅಂಗಡಿಗಳ ಮುಂದೆ ರದ್ದುಗೊಳಿಸಿರುವ ಪಡಿತರ ಚೀಟಿಗಳ ಮಾಹಿತಿ ಹಚ್ಚದೆ ಏಕಾಏಕಿಯಾಗಿ ರದ್ದುಗೊಳಿಸಿದ್ದಾರೆ. ಇದು ಖಂಡನೀಯ. ಕೂಡಲೇ ರಾಜ್ಯ ಸರ್ಕಾರ ಮರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಜರುಗಿಸಬೇಕು. ಇಲ್ಲವಾದರೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿ ಚಲೋ ನಡೆಸಿ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಗಂಗಾಧರ ಪೆರೂರ, ರಂಜನಾ ತುಬಕಿ, ಶೋಭಾ ಕಮತರ, ಬಿ.ಎ. ಮುಧೋಳ, ಜಾಕಿ ಅತ್ತಾರ, ವಿಲಾಸ ಗೋಸಾವಿ, ಆಯುಬ್‌ಖಾನ್ ಪಠಾಣ, ಮೊಹ್ಮದ್ ಕೈಫ್ ಇತರರು ಪ್ರತಿಭಟನೆಯಲ್ಲಿದ್ದರು.