ಸರ್ಕಾರಿ ಶಾಲೆ ಎಂಬ ಕೀಳರಿಮೆ ಬೇಡ

Devanahalli-29-1
ದೇವನಹಳ್ಳಿ ಡಿಎಚ್.ಎಲ್ ಸಭಾಂಗಣದಲ್ಲಿ ಛಲವಾದಿ ಮಹಾಸಭಾದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಾಕ್ರಮವನ್ನು ತಹಸೀಲ್ದಾರ್ ಎಚ್.ಬಾಲಕೃಷ್ಣ ಉದ್ಘಾಟಿಸಿದರು. ಛಲವಾದಿ ಮಹಾಸಭೆ ಅಧ್ಯಕ್ಷೆ ವಾಣಿ ಕೆ.ಶಿವರಾಂ, ತಾಲೂಕು ಅಧ್ಯಕ್ಷ ನಾಗರಾಜ್, ತಹಸೀಲ್ದಾರ್ ಅನಿಲ್ ಕುಮಾರ್ ಅರೋಳಿಕರ್, ಶಿರಸ್ತೇದಾರ್ ಎನ್.ಪಿ.ರಾಜು ಇತರರು ಇದ್ದರು.
Published on

ತಹಸೀಲ್ದಾರ್ ಎಚ್.ಬಾಲಕೃಷ್ಣ ಸಲಹೆ - ಸಿದ್ಧಾರ್ಥ ಚಾರಿಟಬಲ್ ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ

ದೇವನಹಳ್ಳಿ: ಉನ್ನತ ಹುದ್ದೆಯಲ್ಲಿರುವ ಸಾಕಷ್ಟು ಜನ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು, ಹೀಗಾಗಿ ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬೇಡ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರಿದ್ದಾರೆ ಎಂದು ತಹಸೀಲ್ದಾರ್ ಎಚ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಡಿ.ಎಚ್.ಎಲ್.ಸಭಾಂಗಣದಲ್ಲಿ ಛಲವಾದಿ ಮಹಾಸಭಾದ ಸಹಯೋಗದಲ್ಲಿ ಸಿದ್ಧಾರ್ಥ ಚಾರಿಟಬಲ್ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರ‌್ಯಾಂಕ್ ಬಂದವರನ್ನು ನೋಡಿ ಹತಾಶರಾಗುವುದು ಬೇಡ. ಅಂಕಗಳಿಗಾಗಿ ಶಿಕ್ಷಣವಲ್ಲ. ಜ್ಞಾನಕ್ಕಾಗಿ ಶಿಕ್ಷಣ. ಎಲ್ಲರಲ್ಲೂ ಒಂದು ಪ್ರತಿಭಾ ಶಕ್ತಿ ಇರುತ್ತದೆ. ಅವಕಾಶ ಎಲ್ಲರಿಗೂ ಸಿಗುತ್ತದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಉತ್ತಮ ಅಂಕ ಪಡೆದವರು ಜ್ಞಾನಿಗಳು ಕಡಿಮೆ ಅಂಕ ತೆಗೆದವರು ಅಜ್ಞಾನಿಗಳು ಎಂಬ ಮನೋಸ್ಥಿತಿಯನ್ನು ಪಾಲಕರು ಮತ್ತು ಉದ್ಯೋಗ ನೀಡುವವರು ಬಿಟ್ಟು ಕೌಶಲ ಇದ್ದವರಿಗೆ ಅವಕಾಶ ನೀಡಬೇಕು ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿನಲ್ಲಿ ಮೂರು ಜನ ರಾಜ್ಯಮಟ್ಟದ ರ‌್ಯಾಂಕ್ ಪಡೆದಿದ್ದು, 600ಕ್ಕೂ ಹೆಚ್ಚು ಮಕ್ಕಳು ಶೇ.90 ಅಂಕ ಗಳಿಸಿದ್ದಾರೆ. ಸಚಿವರ ಆಶಯದಂತೆ ಇನ್ಫೋಸಿಸ್‌ನವರು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಗಳಾಗಿ ನಿರ್ಮಿಸಿಕೊಡುತ್ತಾರೆ. ಎಲ್ಲರ ಆಶಯ ಶಿಕ್ಷಣಕ್ಕೆ ಒತ್ತು ನೀಡುವುದಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

60ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪುರಸ್ಕರಿಸಿ ನಗದು ಪ್ರೋತ್ಸಾಹಧನ ವಿತರಿಸಲಾಯಿತು.

ಸಿದ್ಧಾರ್ಥ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಕೆ.ವಿ.ಸ್ವಾಮಿ, ಅಧ್ಯಕ್ಷ ಎ.ತ್ರಿಮೂರ್ತಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಗಾಂಧಿ, ಪುರಸಭಾ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ, ಕೆಪಿಸಿಸಿ ವಕ್ತಾರ ಜಿ.ಲಕ್ಷ್ಮೀಪತಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ನಾಗೇಶ್, ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಮಾರುತಿ, ಸಮಾಜ ಸೇವಕ ಶೆಟ್ಟಿಗೆರೆ ರಾಜಣ್ಣ, ಗ್ರಾಪಂ ಕಾರ್ಯದರ್ಶಿಗಳ ಸಂಘದ ರಾಜ್ಯಾಧ್ಯಕ್ಷೆ ಪದ್ಮಾ ಕೆ.ವಿ.ಸ್ವಾಮಿ, ವಕೀಲ ಮಹೇಶ್‌ದಾಸ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪ, ಕೃಷಿ ಇಲಾಖೆ ಸಹಾಯಕ ನಿದೇರ್ಶಕಿ ಸುಶೀಲಮ್ಮ ಇದ್ದರು.

ಸಂವಿಧಾನದ ಮೂಲಕ ಸರ್ವರಿಗೂ ಶಿಕ್ಷಣದ ಹಕ್ಕು ನೀಡಿದ್ದು, ಶೋಷಿತ ಸಮುದಾಯದವರು ಶಿಕ್ಷಣ ಪಡೆದು ಉನ್ನತ ಸ್ಥಾನ ಹುದ್ದೆಗಳಿಗೆ ಏರಲು ಸಾಧ್ಯವಾಯಿತು. ನಿಮ್ಮನ್ನು ಮೇಲೆತ್ತಲು ಮತ್ತೆ ಮತ್ತೆ ಅಂಬೇಡ್ಕರ್ ಹುಟ್ಟಿ ಬರುವುದಿಲ್ಲ. ಬದಲಿಗೆ ಉತ್ತಮ ವಿದ್ಯೆ ಕಲಿತು ಪ್ರತಿಯೊಬ್ಬರ ಅಂಬೇಡ್ಕರ್‌ನಂತೆ ಆಗಬೇಕೆಂಬುದು ನಮ್ಮ ಆಶಯ.

-ಮಹೇಶ್ ದಾಸ್ ವಕೀಲ

ಸಾಧಿಸುವ ಗುರಿ ಇದ್ದರೆ ನೀವು ಅಂದುಕೊಂಡ ಗುರಿ ಮುಟ್ಟಬಲು ಸಾಧ್ಯ. ಶಿಕ್ಷಣ ಒಂದು ದಿನಕ್ಕೆ ಸೀಮಿತವಲ್ಲ. ಅದು ನಿರಂತರವಾಗಿರಲಿ.

-ವಾಣಿ ಕೆ.ಶಿವರಾಂ, ರಾಜ್ಯ ಛಲವಾದಿ ಮಹಾಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net