

ರಾಮದುರ್ಗ: ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮದ ಜತೆಗೆ ಸಮಾಜದಲ್ಲಿ ಅಹಿತಕರ ಘಟನೆಗೆ ಕಾರಣವಾಗುತ್ತದೆ ಎಂದು ದಿವಾಣಿ ನ್ಯಾಯಾಧೀಶ ಮಂಜುನಾಥ ಬಣಕಾರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ಜೆಸಿಐ ಘಟಕ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿಗೆ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಆತಂಕದ ಸಂಗತಿ. ಮಾದಕ ವಸ್ತುವಿಗೆ ವ್ಯಸನಿಯಾಗದೇ ಸಮಾಜಕ್ಕೆ ಒಳಿತನ್ನು ಬಯಸುವ ವ್ಯಕ್ತಿಯಾಗಿ ಹೊರಹೊಮ್ಮುವಂತೆ ಕರೆ ನೀಡಿದರು.
ಜೆಸಿಐ ಅಧ್ಯಕ್ಷ ಶಂಕರ ಜಿರಂಕಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಶಿವಾನಂದ ಮಾತನವರ ಪೋಕ್ಸೋ ಕಾಯಿದೆ ಕುರಿತು ಉಪನ್ಯಾಸ ನೀಡಿದರು. ಡಿ.ಡಿ.ಮುಜಾವರ ಮಾತನಾಡಿದರು. ಜೆಸಿಐ ಘಟಕದ ಮಾಜಿ ಅಧ್ಯಕ್ಷ ಮುರಳಿ ಸೂಳಿಭಾಂವಿ, ಎಚ್.ಕೆ.ದಾಸರ, ರವೀಂದ್ರ ಹರವಿ, ರಾಘವೇಂದ್ರ ಹೂಗಾರ ಇತರರಿದ್ದರು.