

ಸವಣೂರ: ರಕ್ತವನ್ನು ಕೊಡುವಷ್ಟು ಯೋಗಿಯಾಗಿ ಆದರೆ, ರಕ್ತ ಹಾಕಿಸಿಕೊಳ್ಳುವಷ್ಟು ರೋಗಿಯಾಗಬೇಡಿ ಎಂದು ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲೂಕಿನ ಜಲ್ಲಾಪೂರ ಗ್ರಾಮದಲ್ಲಿ ಸ್ಥಳೀಯ ಜೀವದಾನಿಗಳ ಬಳಗ, ಹಿಮ್್ಸ ರಕ್ತನಿಧಿ ಕೇಂದ್ರ ಹಾವೇರಿ ಹಾಗೂ ತಾಲೂಕು ಆಸ್ಪತ್ರೆ ರಕ್ತನಿಧಿ ಕೇಂದ್ರ ಸವಣೂರ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 5ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಯುವಕರು ಗುಟ್ಖಾ, ತಂಬಾಕು, ಮದ್ಯಸೇವನೆಯ ದಾಸರಾಗದೇ ರಕ್ತದಾನ ಹಾಗೂ ನೇತ್ರದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಅಭಿಮಾನ, ಗೌರವ ಎಂದಿಗೂ ಬೆಲೆ ಕಟ್ಟಲಾಗದ್ದು. ರಾಜ್ಯೋತ್ಸವದ ಅಂಗವಾಗಿ ಜಲ್ಲಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಈ ರಕ್ತದಾನ ಶಿಬಿರವು ಮತ್ತೊಮ್ಮೆ ಕರ್ನಾಟಕ ರಾಜ್ಯೋತ್ಸವದ ಹಬ್ಬವಾಗಿ ಕಾಣುತ್ತಿದೆ ಎಂದರು.
ಡಾ. ಅಶೋಕ ಬಮ್ಮಕ್ಕನವರ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲಿ ನಮ್ಮ ಗ್ರಾಮದ ಯುವಕರು ಇಂತಹ ಒಂದು ರಕ್ತದಾನ ಶಿಬಿರದ ಆಲೋಚನೆ ಮಾಡಿ ಸಂಘಟಿತರಾಗಿ ಐದು ವರ್ಷಗಳವರೆಗೆ ಅದನ್ನು ಮುಂದುವರಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಸತೀಶ ಗೌಳಿ, ಡಾ. ಬಸವರಾಜ ತಳವಾರ, ಫಕೀರಪ್ಪ ಉಂಡಳ್ಳಿ, ಶೇಖರಗೌಡ ನಿಂಗನಗೌಡ್ರ, ಪರಶುರಾಮ ಈಳಗೇರ, ರಾಮಣ್ಣ ಅಗಸರ, ದೇವೇಂದ್ರಪ್ಪ ಬಡಿಗೇರ, ಫಕೀರಗೌಡ ಅರಳಿಹಳ್ಳಿ, ಇತರರಿದ್ದರು. ಶರಣಪ್ಪ ಕಲ್ಲಮ್ಮನವರ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ 140 ರಕ್ತದಾನಿಗಳು ರಕ್ತದಾನ ಮಾಡಿದರು.