

ಬೆಂಗಳೂರು: ಜ.1ರಿಂದ ಶಾಲಾ-ಕಾಲೇಜು ಪ್ರಾರಂಭವಾಗಲಿದೆ ಇದರ ಬಗ್ಗೆ ಸಂಶಯ ಬೇಡ. ರೂಪಾಂತರಗೊಂಡಿರುವ ಕರೊನಾ ಬಗ್ಗೆ ಹೆಚ್ಚಿನ ನಿಗಾವಹಿಸಿದ್ದು, ಇದಕ್ಕಾಗಿ ಬೇಕಾದಂತಹ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಶಾಲಾ-ಕಾಲೇಜುಗಳಿಗೆ ಸೂಚನೆ ನೀಡಿದ್ದೇವೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ದಿಗ್ವಿಜಯ 247 ನ್ಯೂಸ್ನಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲಾ-ಕಾಲೇಜು ಆರಂಭಿಸಬೇಕಾದ ಅನಿವಾರ್ಯತೆ ಇದ್ದು, ಜ.1ರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುತ್ತೇವೆ. ಶಾಲಾ-ಕಾಲೇಜು ಆರಂಭಿಸುವುದು ಪ್ರತಿಷ್ಠೆ ಅಲ್ಲ. ಇದೊಂದು ಬದ್ಧತೆ. ಪಾಲಕರು ಮಕ್ಕಳ ಮೇಲೆ ಜವಾಬ್ದಾರಿವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಬೇಕು. ಒಂದು ವೇಳೆ ರೂಪಾಂತರಿ ವೈರಸ್ ಅತಿ ಹೆಚ್ಚು ಪರಿಣಾಮ ಬೀರಿ ಕರೊನಾ ಟೆಕ್ನಿಕಲ್ ಟಾಸ್ಕ್ ಪೋರ್ಸ್, ಸಲಹಾ ಸಮಿತಿ ವರದಿ ಏನು ಹೇಳುತ್ತದೆ ಎಂಬ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಪಠ್ಯಕ್ರಮ ಕಡಿತ: ವಿದ್ಯಾರ್ಥಿಗಳು ಆಂತಕಕ್ಕೆ ಒಳಗಾಗುವುದು ಬೇಡ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೂ ದ್ವಿತೀಯ ಪಿಯು ನಂತರ ವ್ಯಾಸಂಗ ಮಾಡುವಂತಹ ವಿಷಯಗಳಿಗೆ ತೊಂದರೆಯಾಗದಂತೆ ಪಠ್ಯಕ್ರಮವನ್ನು ಕಡಿತ ಮಾಡಬೇಕಿದೆ. ಈ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಒಂದು ವಾರದೊಳಗೆ ಪಠ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆಂದು ಭರವಸೆ ನೀಡಿದರು.
ಶುಲ್ಕ ಬಿಕ್ಕಟ್ಟು: ಶಾಲಾ ಶುಲ್ಕ ಪಾವತಿಸಬೇಕಾ..? ಎಂದು ಪಾಲಕರು ಕೇಳುತ್ತಿದ್ದಾರೆ. ಶಾಲೆಗಳು ಶುಲ್ಕ ಕಟ್ಟುವಂತೆ ಪಾಲಕರಿಗೆ ಸೂಚನೆ ನೀಡಿ ಎಂದು ನಮಗೆ ಮನವಿ ಮಾಡುತ್ತಿದ್ದಾರೆ. ಇದು ಒಂದು ದೊಡ್ಡ ಸಮಸ್ಯೆಯಾಗಿದೆ. ಎಷ್ಟು ಶುಲ್ಕ ಪಾವತಿ ಮಾಡಬೇಕು? ಶಾಲೆ ಅವರು ಎಷ್ಟು ತೆಗೆದುಕೊಳ್ಳಲು ಸಿದ್ಧರಿದ್ದಾರೆ? ಎಂಬ ಮಾಹಿತಿ ಪಡೆಯಲು ಮುಂದಾಗಿದ್ದೇನೆ. ಈ ಕುರಿತು ಅಡ್ವಕೇಟ್ ಜನರಲ್ ಹಾಗೂ ನಮ್ಮ ಇಲಾಖೆ ಪ್ರಧಾನ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲೇ ಒಂದು ಸುತ್ತೋಲೆ ಹೊರಡಿಸಲು ನಿರ್ಧಾರ ಮಾಡಲಾಗಿದೆ ಎಂದರು.