ಮತದಾರರ ಪಟ್ಟಿಯಲ್ಲಿ ತೋಪವಾಗದಿರಲಿ, ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಮಮತಾ ಸೂಚನೆ, ದಾಖಲೆ ಕಡ್ಡಾಯವಾಗಿ ಪರಿಶೀಲಿಸಿ

6e2f2cd4-a7a7-4985-8811-04d0963fe2b9
Published on

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿಗೆ ಹೆಸರು ನೋಂದಣಿ ಅಥವಾ ಸೇರ್ಪಡೆ ಮಾಡುವಾಗ ಹಾಗೂ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವಾಗ ಅಗತ್ಯ ದಾಖಲೆ ಕಡ್ಡಾಯವಾಗಿ ಪರಿಶೀಲಿಸುವ ಜತೆಗೆ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಕಾಲ ಮಿಷನ್‌ನ ಅಪರ ನಿರ್ದೇಶಕಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಡಾ.ಬಿ.ಆರ್ ಮಮತಾ ತಿಳಿಸಿದರು.

ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021ಕ್ಕೆ ಸಂಬಂಧಿಸಿದ ಎರಡನೇ ಹಂತದ ಸಭೆಯಲ್ಲಿ ಮಾತನಾಡಿದರು. ಮತದಾರರ ಪಟ್ಟಿ ದೋಷರಹಿತವಾಗಿದ್ದರೆ ಚುನಾವಣೆ ಸುಸೂತ್ರವಾಗಿ ನಡೆಯಲು ಸಾಧ್ಯ. ಕೆಲವೆಡೆ ಮತದಾರರ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಪ್ರಕರಣಗಳು ಕಂಡುಬಂದಿದೆ. ಇಂತಹ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಮರಣ ಹೊಂದಿರುವವರ ಮರಣ ಪ್ರಮಾಣಪತ್ರ ಮತ್ತು ವಿವಾಹ ಆಮಂತ್ರಣ ಪತ್ರಿಕೆ ದಾಖಲೆಯಲ್ಲಿ ಲಗತ್ತಿಸಿರುವ ಮಾಹಿತಿ ಪರಿಶೀಲಿಸಿ ಎಂದರು.

ಪುರಸ್ಕೃತ ಹಾಗೂ ತಿರಸ್ಕೃತ ಅರ್ಜಿಗಳ ಎಸ್ಸೆಮ್ಸೆಸ್ ಸೇವೆ ಮುಂದುವರಿಸಬೇಕು, ಮತದಾರರ ಪಟ್ಟಿಯಲ್ಲಿ ಫೋಟೋ ಗುಣಮಟ್ಟವಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ, ಜಿಲ್ಲೆಯ ಮತದಾರರು ಚುನಾವಣೆ, ಮತದಾನದ ಮಹತ್ವ ಅರಿತಿದ್ದಾರೆ ಎಂದು ತಿಳಿಸಿದರು.

ಮತದಾರರರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಮತದಾನ, ಮತದಾರರು, ಪ್ರಜಾಪ್ರಭುತ್ವ, ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆ ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮಿಂಚಿನ ನೋಂದಣಿ ಅಭಿಯಾನ ಹಾಗೂ ವ್ಯಾಪಕ ಪ್ರಚಾರದ ಮೂಲಕ ನೋಂದಣಿಗೆ ಕ್ರಮವಹಿಸಲಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಮತ್ತಿತರರು ಇದ್ದರು.

ಮತದಾರರ ಮನೆಗಳಿಗೆ ಭೇಟಿ: ಸಭೆಯ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಡಾ.ಬಿ.ಆರ್.ಮಮತಾ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ವಿಶ್ವನಾಥಪುರ ಗ್ರಾಮದ ಕೆಲವು ಮನೆಗಳಿಗೆ ಭೇಟಿ ನೀಡಿ, ಮತದಾರರೊಂದಿಗೆ ಸಮಾಲೋಚನೆ ನಡೆಸಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿರುವ ಹೆಸರು, ಹುಟ್ಟಿದ ದಿನಾಂಕ ಇನ್ನಿತರ ಮಾಹಿತಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net