ಕೈ ಸರ್ಕಾರದ ಬೋಗಸ್ ಯೋಜನೆಗಳಿಗೆ ಮರುಳಾಗದಿರಿ

4HNL1 BOMMAI
Published on

ಹಾನಗಲ್ಲ: ಬೋಗಸ್ ಯೋಜನೆಗಳನ್ನು ಪ್ರಕಟಿಸಿ ಜನರನ್ನು ದಾರಿ ತಪ್ಪಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಎಚ್ಚರವಾಗಿರಬೇಕು ಎಂದು ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಹೇಳಿದರು.

ತಾಲೂಕಿನ ಜಕ್ಕನಾಯಕನಕೊಪ್ಪದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಅವರು ಮತಯಾಚಿಸಿದರು. ಕಾಂಗ್ರೆಸ್ ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂ. ಕೊಡುವುದಾದರೆ ಭಾರತದಲ್ಲಿನ 60 ಕೋಟಿ ಮಹಿಳೆಯರಿಗೆ ಕೊಡಲು 60 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಭಾರತ ಸರ್ಕಾರದ ಬಜೆಟ್ ಇರುವುದೇ 45 ಲಕ್ಷ ಕೋಟಿ ರೂ., ಮಹಿಳೆಯರಿಗೆ ಕೊಡಲು 15 ಲಕ್ಷ ರೂ. ಗಳು ಕೊರತೆಯಾಗುತ್ತವೆ. ಇನ್ನು ರೈತರ ಸಾಲ ಮನ್ನಾ ಮಾಡಲು, ನೌಕರರಿಗೆ ಪಗಾರ ನೀಡಲು, ಸರ್ಕಾರ ನಡೆಸಲು, ಶಿಕ್ಷಣ, ದೇಶದ ಅಭಿವೃದ್ಧಿಗೆ, ರಸ್ತೆ, ನೀರು, ನೀರಾವರಿಗೆ ಎಲ್ಲಿಂದ ಹಣ ತರುತ್ತಾರೆ?. ಇವರೇನು ನೋಟು ಪ್ರಿಂಟ್ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಇಡೀ ದೇಶದಲ್ಲಿ ಕೇವಲ 230 ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಸರ್ಕಾರ ರಚಿಸಲು 272 ಸ್ಥಾನ ಗೆಲ್ಲಬೇಕು. ಹೀಗಿರುವಾಗ ಕೇಂದ್ರದಲ್ಲಿ ಸರ್ಕಾರ ರಚಿಸಲು ಹೇಗೆ ಸಾಧ್ಯ. ಅದಕ್ಕಾಗಿಯೇ ಜನರನ್ನು ಮೋಸಗೊಳಿಸಲು ಕೊಡಲಾಗದ ಗ್ಯಾರಂಟಿಗಳನ್ನು ಘೊಷಿಸುತ್ತಿದ್ದಾರೆ. ಮಿತ್ರ ಪಕ್ಷಗಳು ಇವರ ಗ್ಯಾರಂಟಿ ಒಪ್ಪಿಕೊಂಡಿಲ್ಲ. ಅಲ್ಲದೆ, ಕಾಂಗ್ರೆಸ್​ನಿಂದ ಪ್ರಧಾನಿ ಅಭ್ಯರ್ಥಿ ಯಾರು ? ಎಂಬುದರ ಬಗ್ಗೆ ಇವರಾರಿಗೂ ಸ್ಪಷ್ಟ ನಿಲುವಿಲ್ಲ. ಅದು ಸಾಧ್ಯವೂ ಇಲ್ಲ. ಇದರಿಂದಾಗಿ ಮತದಾರರು ಮೋಸ ಹೋಗಬಾರದು ಎಂದು ಮನವಿ ಮಾಡಿದರು.

ಬಿಜೆಪಿ ನಾಯಕ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿದರು. ಬಿಜೆಪಿ ಅಲ್ಪಸಂಖ್ಯಾತರ ತಾಲೂಕು ಘಟಕದ ಅಧ್ಯಕ್ಷ ಹುಸೇನಸಾಬ್ ಸುರಳೇಶ್ವರ, ಬಸವಣ್ಣೆಪ್ಪ ಬೆಂಚಳ್ಳಿ, ಸಿ.ಎಂ. ಹಕ್ಕಲಮನಿ, ತಿಪ್ಪಣ್ಣ ಮಾಗೋಡಿ, ಶಾಂತಪ್ಪ ತಿಪಲಾಪುರ, ಬಸನಗೌಡ ದ್ಯಾವನಗೌಡರ, ಸಿ.ಎಸ್. ಬಡಿಗೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net