

ವಿಜಯಪುರ: ಯಾವುದೇ ವಸ್ತು ಖರೀದಿಸುವಾಗ ಗ್ರಾಹಕರು ಮೋಸಗಳಿಗೆ ಒಳಗಾಗದೇ, ಜಾಹೀರಾತುಗಳಿಗೆ ಮರುಳಾಗದೇ ಗುಣಮಟ್ಟದ ಹಾಗೂ ನಿಗದಿತ ಬೆಲೆಯಲ್ಲಿ ವಸ್ತುವನ್ನು ಖರೀದಿಸುವ ಮೂಲಕ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ಸುಸ್ಥಿರ ಜೀವನಶೈಲಿಗೆ ಒಂದು ಸರಳ ಪರಿವರ್ತನೆ’ ಎನ್ನುವ ಘೋಷವಾಕ್ಯದೊಂದಿಗೆ ಶನಿವಾರ ಹಮ್ಮಿಕೊಂಡ ಗ್ರಾಹಕರ ಹಕ್ಕುಗಳ ವಿಶ್ವ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಹಕರ ಹಕ್ಕುಗಳ ಕಾಯ್ದೆ ಜಾರಿಯಾದ ಕಾರಣ ವಿವರಿಸಿದ ಜಿಲ್ಲಾಧಿಕಾರಿಗಳು,ಪ್ರತಿಯೊಂದು ಗ್ರಾಹಕರು ಮೋಸಕ್ಕೊಳಗಾಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಬೇಕು. ಅಲ್ಲದೇ ಯಾವುದೇ ವಸ್ತುಗಳನ್ನು ಖರೀದಿಸಿದರೆ ಗರಿಷ್ಠ ಚಿಲ್ಲರೆ ದರಕ್ಕಿಂತ ಹೆಚ್ಚಿಗೆ ಪಾವತಿ ಮಾಡಬಾರದು. ಗ್ರಾಹಕ ಎಚ್ಚೆತ್ತುಕೊಂಡು ಮೋಸ ಹೋಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಿದಲ್ಲಿ ಸುಸ್ಥಿರ ಜೀವನಶೈಲಿಗೆ ಸರಳ ಪರಿವರ್ತನೆಯಾದಂತೆ ಎಂದು ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ .ಎಸ್ ಹಾಗರಗಿ ಮಾತನಾಡಿ, ಗ್ರಾಹಕರಿಗೆ ಇರುವ ಹಕ್ಕುಗಳು ಮತ್ತು ಪ್ರಸ್ತುತ ಗ್ರಾಹಕರ ಕಾಯ್ದೆಯಡಿ ಇರುವ ಸೇವಾ ಇಲಾಖೆಗಳು, ಹಕ್ಕುಗಳು, ಕರ್ತವ್ಯಗಳ ಕುರಿತು ಪ್ರತಿಯೊಬ್ಬ ಗ್ರಾಹಕರು ಅರಿತುಕೊಳ್ಳಬೇಕು. ಮೋಸಕ್ಕೊಳಗಾದ ಸಂದರ್ಭದಲ್ಲಿ ಅಗತ್ಯ ದಾಖಲಾತಿಗಳನ್ನು ನೀಡಿ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ ಎಂದರು.
ಖ್ಯಾತ ನ್ಯಾಯವಾದಿ ಎಂ.ಜಿ. ಮಠಪತಿ ಹಾಗೂ ನಿವೃತ್ತ ಶಿಕ್ಷಕ ರಾಮಚಂದ್ರ ಮೋನೆ ಮಾತನಾಡಿದರು. ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷೆ ವಿದ್ಯಾ ಗಲಗಲಿ (ಮುತಾಲಿಕ ದೇಸಾಯಿ) ಅಧ್ಯಕ್ಷತೆ ವಹಿಸಿದ್ದರು.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಮದೇವ ಚವಾಣ್ ವಂದಿಸಿದರು. ಎಸ್.ಎಂ. ಕರೇಕಲ್ಲ, ಡಿ.ಆರ್. ನಾಯ್ಕೋಡಿ, ಡಿ.ಆರ್. ಚೌಗಲಾ ಮತ್ತಿತರರಿದ್ದರು.