ಠಾಣೆಗೆ ದೂರು ನೀಡಲು ಬೇಡ ಮುಜುಗರ

Published on

ಪುತ್ತೂರು ಗ್ರಾಮಾಂತರ: ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಯಾವಾಗಲೂ ಕೆಲಸ ಮಾಡುತ್ತದೆ. ಪೊಲೀಸರೆಂದರೆ ಭಯ ಪಡಬೇಡಿ. ಅನ್ಯಾಯವಾದ ಸಂದರ್ಭ ಠಾಣೆಗೆ ಬರಲು ಮುಜುಗರ ಪಡುವ ಅಗತ್ಯವೂ ಇಲ್ಲ ಎಂದು ಸಂಪ್ಯ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ವೆಂಕಪ್ಪ ಹೇಳಿದರು.

ನಿಡ್ಪಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಮಹಿಳಾ ಗ್ರಾಮಸಭೆಯಲ್ಲಿ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಂದನಾ ಮಾತನಾಡಿ, ಮಹಿಳೆಯರ ಅಭಿವೃದ್ಧಿಗೆ ಉತ್ತಮ ಮಾಹಿತಿ ಮತ್ತು ಶಿಕ್ಷಣ ಅಗತ್ಯ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಸುರಕ್ಷತೆ ಬಗ್ಗೆ ಇರುವ ಕಾನೂನಿನ ಅರಿವು ಇರಬೇಕು ಎಂದರು.

ಹಿರಿಯ ಆರೋಗ್ಯ ಕಾರ್ಯಕರ್ತೆ ಕುಸುಮಾವತಿ ಎ.ವಿ. ಮಾತನಾಡಿ, ಪೌಷ್ಟಿಕಾಂಶ ಇರುವ ಸಮತೋಲನ ಆಹಾರ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಒಂದು ಮನೆಯಲ್ಲಿ ಒಳ್ಳೆಯ ಆರೋಗ್ಯವಂತ ಮಹಿಳೆ ಇದ್ದರೆ ಆ ಮನೆಯು ಆರೋಗ್ಯಕರವಾಗಿರುತ್ತದೆ ಎಂದರು.

ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯೆ ಗ್ರೆಟಾ ಡಿಸೋಜ ಉಪಸ್ಥಿತರಿದ್ದರು. ಮಹಿಳೆಯರಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಭಾರತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net