ಕೋವಿಶೀಲ್ಡ್ ಲಸಿಕೆ ಪಡೆಯಲು ಭಯ ಬೇಡ

8 Dwd 4A
Published on

ಧಾರವಾಡ: ಕೋವಿಡ್ 19ರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಲು ಅಧಿಕಾರಿ ಹಾಗೂ ಸಿಬ್ಬಂದಿ ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ಜಿ.ಪಂ. ಸಿಇಒ ಡಾ. ಬಿ. ಸುಶೀಲಾ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ 2ನೇ ಹಂತದ ಕೋವಿಶೀಲ್ಡ್ ಲಸಿಕಾಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರೊನಾ ಫ್ರಂಟ್​ಲೈನ್ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್, ಗೃಹರಕ್ಷಕ ದಳ, ಜೈಲು ಸಿಬ್ಬಂದಿ, ಕಂದಾಯ, ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗೆ 2ನೇ ಹಂತದಲ್ಲಿ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ನೋಂದಾಯಿತ ಎಲ್ಲ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

2ನೇ ಹಂತದ ಪ್ರಥಮ ಲಸಿಕೆ ಪಡೆದ ಧಾರವಾಡ ಕಾರಾಗೃಹ ಅಧೀಕ್ಷಕ ಎಂ.ಎ. ಮರಿಗೌಡ ಮಾತನಾಡಿ, ಲಸಿಕೆ ಪಡೆಯುವುದರಿಂದ ಅನವಶ್ಯಕ ಆತಂಕ, ಭಯ ದೂರವಾಗಿ ವಿಶ್ವಾಸ ಮೂಡುತ್ತದೆ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಜಿಲ್ಲಾ ಆರ್​ಸಿಎಚ್​ಒ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವಿಮಠ, ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net