ಪೊಲೀಸರೆಂದರೆ ಭಯಬೇಡ, ಭರವಸೆ ಇರಲಿ

h19-Police 2
Published on

ಹುಬ್ಬಳ್ಳಿ: ಪೊಲೀಸರು ಎಂದರೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ನಮ್ಮ ಇಲಾಖೆ ಮೇಲೆ ಭರವಸೆ ಇಡಬೇಕು ಎಂದು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿದರು.
ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 49 ಲಕ್ಷ ರೂ. ಮೌಲ್ಯದ ಪೋನ್ ಕಳೆದುಕೊಂಡಿದ್ದ 315 ವಾರಸುದಾರರಿಗೆ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ವಿತರಿಸಿ ಅವರು ಮಾತನಾಡಿದರು.
ಮೊಬೈಲ್ ಫೋನ್ ಈಗ ನಮ್ಮದೇ ಆದ ಒಂದು ಪ್ರಪಂಚ. ನಮ್ಮ ಕುಟುಂಬದ ಸಿಹಿ-ಕಹಿ ಘಟನೆಗಳು ಇದರಲ್ಲಿ ಸೆರೆಯಾಗಿರುತ್ತವೆ. ಹೀಗೆ ಈ ಜಗತ್ತು ಏಕಾಏಕಿ ಕಳೆದುಹೋದಾಗ ದಿಕ್ಕೇ ತೋಚದಂತಾಗುತ್ತದೆ. ಮೊಬೈಲ್ ಫೋನ್‌ನ ಬೆಲೆ ಕಡಿಮೆ ಇದ್ದರೂ ಅದರ ಜತೆಗಿನ ಬಾಂಧವ್ಯ, ಅದರೊಳಗಿನ ಸವಿ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಮೊಬೈಲ್ ಕಳೆದು ಹೋದ ತಕ್ಷಣ ಐಎಂಇಐ ಸಂಖ್ಯೆಯ ಸಮೇತ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು. ಬಳಿಕ ಸಿಇಎನ್ ಕ್ರೈಂ ವಿಭಾಗದ ಪೊಲೀಸ್ ಸಿಬ್ಬಂದಿ ಗಮನಕ್ಕೆ ತರಬೇಕು. ಹೀಗೆ ಮಾಡುವುದರಿಂದ ಮೊಬೈಲ್ ಫೋನ್‌ಲ್ಲಿರುವ ಬ್ಯಾಂಕ್ ಖಾತೆ, ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ತಡೆಗಟ್ಟಲು ಸಾಧ್ಯವಿದೆ ಎಂದರು.
ಡಿಸಿಪಿ ಕುಶಲ್ ಚೌಕ್ಸೆ ಮಾತನಾಡಿ, ಸೈಬರ್ ವಂಚನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ. ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ವಂಚನೆ ಆದಾಗ 1930ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಹನಿಟ್ರಾೃಪ್, ಲಕ್ಕಿ ಡ್ರಾ ಹಾಗೂ ಬ್ಯಾಂಕ್ ಅಕೌಂಟ್‌ನಿಅದ ಹಣ ಕಡಿತವಾದ 1 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚಕರನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ. ದೂರು ದಾಖಲಿಸುವುದು ತಡವಾದಷ್ಟು ವಂಚಕರು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದರು.
ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯಕ ಮಾತನಾಡಿ, ಮೊಬೈಲ್ ಫೋನಿನ ಐಎಂಇಐ ನಂಬರ್ ಅನ್ನೂ ಸಹ ಬದಲಿಸಬಲ್ಲ ತಂತ್ರಜ್ಞಾನದ ಮಧ್ಯೆಯೂ ನಮ್ಮ ಸಿಬ್ಬಂದಿ 315 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ತಲುಪಿಸಿದ್ದಾರೆ. ಸಿಇಎನ್ ಕ್ರೈಂ ವಿಭಾಗದ ಸಿಬ್ಬಂದಿ ಸಹಕಾರದಿಂದ ಇಷ್ಟು ಫೋನ್ ರಿಕವರಿ ಮಾಡಲಾಗಿದೆ ಎಂದರು.
ಸಿಎಆರ್ ಡಿಸಿಪಿ ಯಲ್ಲಪ್ಪ ಕಾಶಪ್ಪನವರ, ಎಸಿಪಿ ವಿನೋದ ಮುಕ್ತೇದಾರ, ಡಾ. ಶಿವರಾಜ ಕಟಕಬಾವಿ, ಸಿಇಎನ್ ಕ್ರೈಂ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net