

ಲಕ್ಷ್ಮೇಶ್ವರ: ಹವಾಮಾನ ವೈಪರೀತ್ಯದಿಂದಾಗಿ ಕಾಣಿಸಿಕೊಂಡ ಮದ್ರಾಸ್ ಐ ಕಣ್ಣಿನ ಸೋಂಕು ಮಕ್ಕಳು ಮತ್ತು ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಭಯಪಡುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತೆ ಕ್ರಮ ಮತ್ತು ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಧಾರವಾಡದ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯೆ ಡಾ. ದಿವ್ಯಾ ಎನ್.ಪಿ. ಹೇಳಿದರು.
ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್, ರೆಡ್ ಕ್ರಾಸ್ ಘಟಕ ಮತ್ತು ಧಾರವಾಡದ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಣ್ಣುಗಳ ಜಾಗೃತಿ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
‘ಗುಲಾಬಿ ಕಣ್ಣಿನ ಸೋಂಕಿನಿಂದ ಕಣ್ಣು ಕೆಂಪಾಗುವುದು, ಉರಿತ ಹಾಗೂ ಪಿಚ್ಚುಗಟ್ಟುವಂತಹ ಲಕ್ಷಣಗಳು ಕಂಡು ಬರುತ್ತವೆ. ಸೋಂಕು ತಗುಲಿರುವ ವ್ಯಕ್ತಿಗಳು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು, ಕನ್ನಡಕ ಧರಿಸುವುದು ವೈದ್ಯರ ಸಲಹೆ ಪಡೆದುಕೊಳ್ಳುವ ಮೂಲಕ ಸೋಂಕು ಹರಡದಂತೆ ತಡೆಗಟ್ಟಬಹುದು. ಸೋಂಕಿತ ವ್ಯಕ್ತಿ ಬಳಸಿದ ವಸ್ತ್ರ, ಹಾಸಿಗೆ ಬಳಸಬಾರದು ಮತ್ತು ಪರಸ್ಪರ ಅಂತರ ಕಾಯುವುದು ಉತ್ತಮ. ನಾಲ್ಕೈದು ದಿನಗಳು ಕಾಡುವ ಈ ಸೋಂಕು ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆ ಭಯ ಬೇಡ ಜಾಗ್ರತೆ ವಹಿಸಿ’ ಎಂದರು.
ಕಾಲೇಜಿನ 200ಕ್ಕೂ ವಿದ್ಯಾರ್ಥಿಗಳು, ಸಿಬ್ಬಂದಿ ಶಿಬಿರದ ಸದುಪಯೋಗ ಪಡೆದರು. ಪ್ರಾಚಾರ್ಯ ಡಾ. ಉದಯಕುಮಾರ ಹಂಪಣ್ಣವರ, ಉಪ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ, ಪಪೂ ಕಾಲೇಜಿನ ಪ್ರಾಚಾರ್ಯ ಡಾ. ಎನ್. ಹಯವದನ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಂಜೀವ ಕುಲಕರ್ಣಿ, ಹರೀಶ ಮುಂಜಿ, ಪ್ರೊ. ವಿಕ್ರಮ ಶಿರೋಳ, ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಮಹೇಂದ್ರ ಹುಲ್ಲೂರ, ಪ್ರೊ. ಷಣ್ಮುಖ. ಜಿ, ಪ್ರೊ. ರಾಜೇಶ್ವರಿ ಗಾಮನಗಟ್ಟಿ, ಪ್ರೊ ಯಲ್ಲಪ್ಪ ಜೆ, ಆದಿತ್ಯ ಪದಕಿ, ಅಲ್ತಾಫ್ ಗೋಕಾವಿ, ರವಿ ಸದ್ಲಾಪುರ ಹಲವರಿದ್ದರು.