ಶಿಸ್ತು ಕ್ರಮಕ್ಕೆ ಮುಂದಾದಲ್ಲಿ ಹೆದರಬೇಡಿ

hdmc emp
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಿರತ ರಾಜ್ಯದ ಮಹಾನಗರ ಪಾಲಿಕೆಗಳ ನೌಕರರ ಹಿತ ಕಾಯುವುದು ಸಂಘದ ಜವಾಬ್ದಾರಿಯಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನೌಕರರ ಮೇಲೆ ರಾಜ್ಯ ಸರ್ಕಾರ ಶಿಸ್ತು ಕ್ರಮಕ್ಕೆ ಮುಂದಾದಲ್ಲಿ ಯಾರೂ ಸಹ ಹೆದರುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎ. ಅಮೃತರಾಜ್ ಹೇಳಿದರು.

ರಾಜ್ಯದ ಮಹಾನಗರ ಪಾಲಿಕೆಗಳ ನೌಕರರು ಜು. 8ರಿಂದ ಕರ್ತವ್ಯದಿಂದ ದೂರ ಉಳಿದು ಪ್ರತಿಭಟನೆ ನಡೆಸಿದ್ದು, ಗುರುವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಅವರು ಪ್ರತಿಭಟನಾ ನಿರತ ಹು-ಧಾ ಮಹಾನಗರ ಪಾಲಿಕೆಯ ನೌಕರರನ್ನು ಉದ್ದೇಶಿಸಿ ಮಾತನಾಡಿದರು.

ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಗೆ ಹೋಗುತ್ತಿದ್ದೇವೆ ಎಂದು 6-7 ತಿಂಗಳ ಹಿಂದೆಯೇ ಸರ್ಕಾರಕ್ಕೆ ತಿಳಿಸಿದ್ದೇವು. ಆದರೂ, ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ನಗರಾಭಿವೃದ್ಧಿ ಇಲಾಖೆಯ ಸಚಿವರಾಗಲಿ, ಕಾರ್ಯದರ್ಶಿಗಳಾಗಲಿ ಭೇಟಿಯಾಗಲಿಲ್ಲ. ನಮ್ಮ ಮನವಿ ಸ್ವೀಕರಿಸಿದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಯಾವುದೇ ಭರವಸೆ ನೀಡಲಿಲ್ಲ. ಹಾಗಾಗಿ ಪ್ರತಿಭಟನೆ ಮುಂದುವರಿಸಿದ್ದೇವೆ ಎಂದರು.

ರಾಜ್ಯ ಸರ್ಕಾರಿ ನೌಕರರಂತೆ ಮಹಾನಗರ ಪಾಲಿಕೆ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು ಕೊಡಬೇಕು. ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಬೇಕು. ನೌಕರರ ವೈದ್ಯಕೀಯ ವೆಚ್ಚ ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಬೇಕು. ಇತ್ಯಾದಿ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ, ರಾಜ್ಯ ಸರ್ಕಾರ ನೌಕರರಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಪ್ರತಿಭಟನೆಯಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಮುಂದೆ ಕರ್ತವ್ಯಕ್ಕೆ ಹಾಜರಾದಾಗ ನಿತ್ಯ 1-2 ಗಂಟೆ ಹೆಚ್ಚು ಕೆಲಸ ಮಾಡಿ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮುಗಿಸುವ ಬದ್ಧತೆ ವ್ಯಕ್ತಪಡಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net