

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಡೆಂಘೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ತೆಗೆದುಕೊಳ್ಳಬೇಕು ಹೊರತು ಭಯ ಪಡುವ ಅಗತ್ಯವಿಲ್ಲ ಎಂದು ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ಉತ್ತರಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಸರ ಸ್ವಚ್ಛತಾ ಅಭಿಯಾನ,ಸೊಳ್ಳೆಗಳ ಔಷಧ ಸಿಂಪಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಪ್ರಸ್ತುತ ಮಳೆಗಾಲ ಇರುವ ಹಿನ್ನೆಯಲ್ಲಿ ಡೆಂಘೆ ಕೇಸ್ಗಳು ಸಹಜವಾಗಿ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ನಗರಗಳಲ್ಲಿನ ಸ್ವಚ್ಛತೆಗೆ ಜನರು ಆದ್ಯತೆ ನೀಡಬೇಕು. ಮನೆ ಸುತ್ತಮುತ್ತ ಮತ್ತು ಮೇಲ್ಛಾವಣಿ ತೊಟ್ಟಿಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ರೋಗಗಳಿಂದ ದೂರ ಇರಬಹುದು. ಡೆಂಘೆ ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಬಿಬಿಎಂಪಿ ಕಾರ್ಯವನ್ನು ಶ್ಲಾಘಿಸಿದರು.
ಉತ್ತರಹಳ್ಳಿ ಸುತ್ತಮುತ್ತ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಣೆ, ಸ್ವಚ್ಛತೆ ನಡೆಸಿದ ಶ್ರೀ ವಿನಯ್ ಗುರೂಜಿ, ಪಾಲಿಕೆ ವೈದ್ಯಾಧಿಕಾರಿಗಳ ಸಹಯೋಗದೊಂದಿಗೆ ಡೆಂಘೆ ಬಗ್ಗೆ ಜಾಗೃತಿ ಮೂಡಿಸಿದರು. ಇದೇ ವೇಳೆ ಪಾಲಿಕೆಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಶಾಸಕ ಎಂ. ಕೃಷ್ಣಪ್ಪ, ಟ್ರಸ್ಟ್ ಇದರ ಮಣಿ ಹೆಗ್ಡೆ ಸೇರಿದಂತೆ ನೂರಾರು ಅವಧೂತ ಅನುಯಾಯಿಗಳು ಉಪಸ್ಥಿತಿದ್ದರು.