

ವಿಜಯವಾಣಿ ವಿಶೇಷ ಧಾರವಾಡ
ಲಾಕ್ಡೌನ್ ನಿಯಮ ಉಲ್ಲಂಘನೆಯಾಗಬಾರದೆಂಬ ಸದುದ್ದೇಶದಿಂದ ಬಡ ಜನರಿಗೆ ಆಹಾರ ಧಾನ್ಯ ನೀಡಬೇಕೆನ್ನುವ ದಾನಿಗಳು ಜಿಲ್ಲಾಡಳಿತ ಕೇಂದ್ರಗಳಿಗೆ ತಲುಪಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಆದರೆ, ಸಂಘ, ಸಂಸ್ಥೆಗಳು ಮಾತ್ರ ಈ ಕೇಂದ್ರದತ್ತ ಹೆಚ್ಚು ಒಲವು ತೋರಿಸುತ್ತಿಲ್ಲ.
ಜನರ ಆರೋಗ್ಯ ದೃಷ್ಟಿಯಿಂದ ಜಿಲ್ಲಾಡಳಿತ ದಾನಿಗಳು ನೀಡುವ ಆಹಾರ ಧಾನ್ಯಗಳನ್ನು ಅಗತ್ಯವುಳ್ಳವರಿಗೆ ಮುಟ್ಟಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿದೆಯಾದರೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಇತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾಡಳಿತದ ಆದೇಶದ ನಂತರವೂ ಸಂಘ-ಸಂಸ್ಥೆಗಳು ನೇರವಾಗಿ ಅಗತ್ಯವುಳ್ಳವರಿಗೆ ಧಾನ್ಯ ವಿತರಿಸುತ್ತಿರುವುದು ಕಂಡುಬರುತ್ತಿದೆ.
ಈ ರೀತಿ ಜನರ ಮಧ್ಯೆ ಹೋಗಿ ಧಾನ್ಯ ವಿತರಿಸುವಾಗಲೇ ಸೋಂಕು ಹರಡಿದ ಪ್ರಕರಣ ಜಿಲ್ಲೆಯಲ್ಲಿ ಈಗಾಗಲೇ ದಾಖಲಾಗಿದ್ದರಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅಗತ್ಯವುಳ್ಳವರಿಗೆ ದೇಣಿಗೆ ನೀಡುವುದೇನೋ ಒಳ್ಳೆಯ ಕೆಲಸ. ಆದರೆ, ಅದರಿಂದ ಇನ್ನೊಂದು ಅದ್ವಾನವಾದರೆ ಯಾರು ಹೊಣೆ? ಹೆಚ್ಚು ಜನರು ಸೇರಿದಾಗ ದಾನಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ದಾನಿಗಳಿಗೇ ಸೋಂಕಿದ್ದರೆ ಅದೆಷ್ಟೋ ಜನರು ಅದರಿಂದ ನರಳುವ ಸ್ಥಿತಿ ಬಂದೊದಗಬಹುದು. ಜಾಗೃತಿ ಮೂಡಿಸಬೇಕಾದವರೇ ಹೀಗೆ ಮಾಡಿದರೆ ಹೇಗೆ ಎಂಬ ಪ್ರಶ್ನೆ ಜಿಲ್ಲಾಡಳಿತವನ್ನು ಕಾಡುತ್ತಿದೆ.
ಜಿಲ್ಲಾಡಳಿತ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಪ್ರಾರಂಭಿಸಿರುವ ಆಹಾರ ಕಿಟ್ ದೇಣಿಗೆ ಸ್ವೀಕೃತಿ ಕೇಂದ್ರಕ್ಕೆ ಬೆರಳೆಣಿಕೆಯಷ್ಟು ಸಂಸ್ಥೆಗಳು ಮಾತ್ರ ಆಹಾರ ಧಾನ್ಯ ಕಿಟ್ ನೀಡಿವೆ. ಶನಿವಾರದವರೆಗೆ 1,320 ಕಿಟ್ಗಳು ಕೇಂದ್ರದಲ್ಲಿ ಸ್ವೀಕೃತಿಯಾಗಿದ್ದು, 1,317 ಕಿಟ್ಗಳನ್ನು ಬಡ ಜನರಿಗೆ ಹಂಚಲಾಗಿದೆ. ಈ ಪ್ರಕ್ರಿಯೆಗೆಂದೇ 4 ಜನರ 2 ತಂಡಗಳನ್ನು ರಚಿಸಲಾಗಿದೆ. ದಾನಿಗಳು ನೀಡುವ ವಸ್ತುಗಳನ್ನು ಅವರು ಹೇಳಿದ ಪ್ರದೇಶ ಹಾಗೂ ವ್ಯಕ್ತಿಗಳಿಗೆ ಸಾಮಾಜಿಕ ಅಂತರ್ ಕಾಯ್ದುಕೊಂಡು ವ್ಯವಸ್ಥಿತ ರೀತಿಯಲ್ಲಿ ವಿತರಿಸಲು ಸೂಕ್ತ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಕೇಂದ್ರದಲ್ಲೇ ಉಳಿದಿದ್ದ ಸಾಮಗ್ರಿ: ಈ ಹಿಂದೆ ಜಿಲ್ಲೆಯಲ್ಲಿ ನೆರೆ ಹಾವಳಿ ಎದುರಾದ ಸಂದರ್ಭದಲ್ಲಿ ಅನೇಕರು ನಿರಾಶ್ರಿತರ ಸಹಾಯಕ್ಕೆ ಮುಂದಾಗಿದ್ದರು. ಕೆಲವರು ನೇರವಾಗಿ ಅಗತ್ಯ ವಸ್ತುಗಳನ್ನು ಜನರಿಗೆ ನೀಡಿದ್ದರೆ, ನೂರಾರು ಸಂಘ- ಸಂಸ್ಥೆಗಳು ಕೇಂದ್ರಕ್ಕೆ ದೇಣಿಗೆ ನೀಡಿದ್ದರು. ಆದರೆ, ನೆರೆ ಹಾವಳಿ ತಣ್ಣಗಾದ ಮೇಲೂ ಕೆಲ ವಸ್ತುಗಳು ಕೇಂದ್ರದಲ್ಲೇ ಉಳಿದಿದ್ದನ್ನು ಇಲ್ಲಿ ಸ್ಮರಿಸಬಹುದು. ರೋಗ ಹರಡುವ ಭೀತಿಯಿಂದ ನೇರವಾಗಿ ಜನರಿಗೆ ದೇಣಿಗೆ ನೀಡಬೇಡಿ ಎಂದರೂ ಜನ ಕೇಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುವ ಅಧಿಕಾರಿಗಳು, ದಾನಿಗಳ ಅನುಕೂಲಕ್ಕಾಗೇ ನಿರ್ವಿುಸಿರುವ ಕೇಂದ್ರಕ್ಕೆ ಧಾನ್ಯಗಳನ್ನು ನೀಡಿ ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರ ಆರೋಗ್ಯ ಮತ್ತು ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಸಂಘ, ಸಂಸ್ಥೆಗಳು ಆಹಾರ ಧಾನ್ಯ ವಿತರಣೆಯನ್ನು ನೇರವಾಗಿ ಕೈಗೊಳ್ಳದೆ, ಜಿಲ್ಲಾಡಳಿತ ಸ್ಥಾಪಿಸಿರುವ ಕೇಂದ್ರಗಳಲ್ಲೇ ಸಲ್ಲಿಸಬೇಕು. ದಾನಿಗಳು ಸೂಚಿಸುವ ಸ್ಥಳ ಮತ್ತು ವ್ಯಕ್ತಿಗಳಿಗೆ ತಲುಪಿಸುವ ವ್ಯವಸ್ಥೆ ಸಹ ಮಾಡಲಾಗುವುದು.| ದೀಪಾ ಚೋಳನ್ ಜಿಲ್ಲಾಧಿಕಾರಿ