ಗುಣಮಟ್ಟದ ಸೇವೆಗೆ ದಾನಿಗಳ ಬೆಂಬಲ ಅವಶ್ಯ

Donor support is essential for quality service
ರೋಟರಿ ಮುಂದಾಳತ್ವದಲ್ಲಿ ತಾಲೂಕಾಸ್ಪತ್ರೆಯ ಮಕ್ಕಳ ವಿಭಾಗ ಉನ್ನತೀಕರಣಕ್ಕೆ ನೀಡಿದ ಕೊಡುಗೆಯನ್ನು ಹಸ್ತಾಂತರಿಸಲಾಯಿತು. ಶರದ್ ಪೈ, ವಿನಾಯಕ ಪೈ, ಡಾ. ಪ್ರಸನ್ನ ನಾಯಕ, ದಿನಕರ ಶೆಟ್ಟಿ, ಅತುಲ ಕಾಮತ, ವಿನಾಯಕ ಹೆಗಡೆ, ನಿಖಿಲ್ ಕ್ಷೇತ್ರಪಾಲ ಇತರರು ಇದ್ದರು.
Published on

ಕುಮಟಾ: ಸರ್ಕಾರ, ಜನಪ್ರತಿನಿಧಿಗಳ ಪ್ರಗತಿ ಚಿಂತನೆಯೊಂದಿಗೆ ರೋಟರಿ ಕ್ಲಬ್ ನಂತಹ ಸೇವಾ ಸಂಸ್ಥೆಗಳು, ದಾನಿಗಳ ಬೆಂಬಲ ಹಾಗೂ ಸಿಬ್ಬಂದಿ ಸಹಯೋಗ ಇದ್ದರೆ ಗುಣಮಟ್ಟದ ಸೇವೆ ಮತ್ತು ಉನ್ನತಿ ಸಾಧಿಸುವುದು ಕಷ್ಟವಲ್ಲ ಎಂಬುದಕ್ಕೆ ಕುಮಟಾದ ತಾಲೂಕಾಸ್ಪತ್ರೆ ಉತ್ತಮ ಉದಾಹರಣೆಯಾಗಿದೆ ಎಂದು ಟಾಟಾ ಪ್ರಾಜೆಕ್ಟ್ಸ್ ಎಂಡಿ ಹಾಗೂ ಸಿಇಒ ವಿನಾಯಕ ಪೈ ಹೇಳಿದರು.

ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ಸ್ಥಳೀಯ ರೋಟರಿ ಕ್ಲಬ್ ಮುಖಾಂತರ 40 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಉಪಕರಣಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಎಲ್ಲವೂ ಜನಪ್ರತಿನಿಧಿಯಿಂದ ಅಸಾಧ್ಯ. ಸಿರಿವಂತರಾದವರಿಗೆ ಸೇವೆ-ದಾನದ ಮನಸ್ಸು ಇದ್ದರೆ ಬಡವರ, ಸಾರ್ವಜನಿಕರ ಸಾಕಷ್ಟು ಅಗತ್ಯಗಳನ್ನು ಈಡೇರಿಸಲು ಸಾಧ್ಯ. ಇಂಥ ಸಹಯೋಗ ಹಾಗೂ ವೈದ್ಯಕೀಯ ಸಿಬ್ಬಂದಿ ಶೃದ್ಧೆಯಿಂದಾಗಿ ತಾಲೂಕಾಸ್ಪತ್ರೆಯನ್ನು ಜಿಲ್ಲೆಯಲ್ಲೇ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ದಿ.ವಿಷ್ಣು ಕಾಮತ ಅವರ ಕಾಲದಿಂದಲೂ ಕ್ಷೇತ್ರದ ಅಗತ್ಯಗಳಲ್ಲಿ ರೋಟರಿ ಕ್ಲಬ್ ಸಹಯೋಗ ಅಪ್ರತಿಮ. ಹಾಗೆಯೇ ಮೂರೂರು ಗುಡ್ಡದ ಮೇಲೆ 15 ಎಕರೆ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ಹಾಗೂ ಪ್ರಸ್ತಾವನೆ ಸರ್ಕಾರದ ಮುಂದಿಟ್ಟಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ಅತುಲ ಕಾಮತ್ ಮಾತನಾಡಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ ನೀಗಿಸಲು ತಾಲೂಕಾಸ್ಪತ್ರೆಯ ಉನ್ನತೀಕರಣದ ಮಾರ್ಗ ನಿರ್ಧರಿಸಿ, ರೋಟರಿ ಕ್ಲಬ್ 2021-22ರಲ್ಲಿ ಅಂದಾಜು ಒಂದು ಕೋಟಿ ಮೊತ್ತದ ಉಪಕರಣಗಳ ಕೊಡುಗೆಯಿಂದಾಗಿ ನೂರಾರು ಪ್ರಾಣಗಳು ಊಳಿಯಲು ಕಾರಣವಾಗಿದೆ. ಪ್ರಸ್ತುತ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆ ಚಾಲ್ತಿಯಲ್ಲಿದೆ. ಜಿಲ್ಲೆಯ ಇತರೆಲ್ಲ ಆಸ್ಪತ್ರೆಗಳಿಗಿಂತ ಹೆಚ್ಚಿನ ಸೌಲಭ್ಯಗಳು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಲಭ್ಯವಾಗಲಿದೆ ಎಂದರು.

ಮಕ್ಕಳ ವಿಭಾಗದ ತಜ್ಞ ಡಾ.ಪ್ರಸನ್ನ ನಾಯಕ ಮಾತನಾಡಿ, ಮಕ್ಕಳ ವಿಭಾಗಕ್ಕೆ ಹಲವು ವೈದ್ಯಕೀಯ ಉಪಕರಣಗಳ ತೀರಾ ಅಗತ್ಯವಿತ್ತು. ಫೋಟೋ ಥೆರಪಿ ಘಟಕವೂ ಸಾಕಷ್ಟಿರಲಿಲ್ಲ. ಈಗ ನೀಡಿದ ಉಪಕರಣಗಳಿಂದ ಮಕ್ಕಳ ತುರ್ತು ಆರೋಗ್ಯ ಸೇವೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ನಿಕಟಪೂರ್ವ ರೋಟರಿ ಗವರ್ನರ ಶರದ ಪೈ, ರೋಟರಿ ಗವರ್ನರ ಅರುಣ ಭಂಡಾರೆ, ರೋಟರಿ ಕಾರ್ಯದರ್ಶಿ ಸಿಎ ವಿನಾಯಕ ಹೆಗಡೆ ಮಾತನಾಡಿದರು. ರೋಟರಿಯ ರಮೇಶ ತಿವಾರಿ ಉಪಸ್ಥಿತರಿದ್ದರು.

ರಾಷ್ಟ್ರಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಾ. ನಾಗಶ್ರೀ ಪ್ರಾರ್ಥಿಸಿದರು. ರೋಟರಿ ಅಧ್ಯಕ್ಷ ಕಿರಣ ನಾಯಕ ಸ್ವಾಗತಿಸಿದರು. ಖಜಾಂಚಿ ನಿಖಿಲ್ ಕ್ಷೇತ್ರಪಾಲ ವಂದಿಸಿದರು. ಜೈವಿಠ್ಠಲ ಕುಬಾಲ ನಿರೂಪಿಸಿದರು. ತಾಪಂ ಇಒ ರಾಜೇಂದ್ರ ಭಟ್, ಉಪಕರಣಗಳನ್ನು ಪೂರೈಸಿದ ಚೇತನ ನಾಯ್ಕ, ರೋಟರಿಯ ಜಯಶ್ರೀ ಕಾಮತ, ಡಾ. ಡಿ.ಡಿ. ನಾಯಕ, ನಾಸಿರ್, ಗುರುರಾಜ ಶೆಟ್ಟಿ, ಸತೀಷ ನಾಯ್ಕ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net