

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಡೋಣೂರ ಒಬ್ಬ ಶ್ರೇಷ್ಠ ಆಡಳಿತಗಾರ, ವಿದ್ಯಾರ್ಥಿಗಳ ಬಾಳಿನ ಬೆಳಕಾಗಿ ಎಲ್ಲರ ಮನಸ್ಸಲ್ಲಿ ಉಳಿದಿದ್ದಾರೆ. ಅಷ್ಟಾವಧಾನಿ ಡೋಣೂರ ಎಂದು ಅವರನ್ನು ಉಲ್ಲೇಖಿಸಿದರೆ ತಪ್ಪಾಗಲಾರದು ಎಂದು ಚಿಂತಕ ಅರವಿಂದ ದೇಶಪಾಂಡೆ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಪ್ರೊ. ಬಸವರಾಜ ಡೋಣೂರ ಸನ್ಮಾನ ಸಮಿತಿ, ಧಾರವಾಡ ಕಟ್ಟೆ ಹಾಗೂ ಬೆಂಗಳೂರಿನ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಡೋಣೂರರ ಕುರಿತು ವಿಚಾರ ಸಂಕಿರಣ, ಗ್ರಂಥಗಳ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಬಸವರಾಜ ಪಾಟೀಲ ಮಾತನಾಡಿ, ಜಾಗತೀಕರಣದ ಸಂದರ್ಭದಲ್ಲಿ ಎಲ್ಲ ವಿಷಯಗಳೂ ಮಾರುಕಟ್ಟೆ ವಿಷಯಗಳಾಗಿವೆ. ಇಡೀ ಮಾನವ ಜನಾಂಗ ವಿಚಿತ್ರ ತಿರುವು ಪಡೆದುಕೊಂಡು ಹೊರಟಿದೆ. ಮನುಷ್ಯ ಇತ್ತೀಚೆಗೆ ಸಂವೇದನಾಶೀಲನಾಗುತ್ತಿದ್ದಾನೆ. ಬೇರೆಯವರ ಬಾಳಿಗೆ ಬೆಳಕಾಗುವುದು ನಮ್ಮ ಜೀವನದ ನಿಜವಾದ ಆದರ್ಶವಾಗಬೇಕು ಎಂದರು.
ಸಂಗಮೇಶ್ವರ ಬಬಲೇಶ್ವರ ಮಾತನಾಡಿ, ಈ ದೇಶದ ಜಾತಿ, ಉಪಜಾತಿ ವ್ಯವಸ್ಥೆಯಲ್ಲಿ ನಲುಗಿ ಹೋಗುವ ಒಬ್ಬ ಸೃಜನಶೀಲ, ಮುಗ್ಧ ಮನಸ್ಸಿನ ಗುರುವಿಗೆ ಶ್ರೀರಕ್ಷೆಯಾಗಿ ನಿಲ್ಲುವ ಶಿಷ್ಯ ಬಳಗ ಈ ನಾಡಿನಲ್ಲಿ ಇನ್ನೂ ಜೀವಂತವಾಗಿದೆ. ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಗುರುಗಳು ಇನ್ನೂ ಎತ್ತರಕ್ಕೆ ಸಾಗಿ ಸಾವಿರಾರು ವಿದ್ಯಾರ್ಥಿಯಾಳಿಗೆ ಬೆಳಕಾಗಬೇಕು ಎಂದರು.
ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅಭಿನಂದನಾಪರ ನುಡಿಗಳನ್ನಾಡಿದರು. ಶ್ರೀಧರ ನಾಡಗೀರ, ಡಾ.ವೀಣಾ ಶಾಂತೇಶ್ವರ, ಪ್ರೊ. ಮಲ್ಲಿಕಾರ್ಜುನ ಅಳಗವಾಡಿ, ಪ್ರೊ. ಡಿ.ಬಿ.ಕರಡೋಣಿ, ಪ್ರೊ. ಶಿವಾನಂದ ಶೆಟ್ಟರ್, ಶಂಕರ ಹಲಗತ್ತಿ, ಹರ್ಷ ಡಂಬಳ, ಶ್ರೀನಿವಾಸ ವಾಡಪ್ಪಿ, ಡಾ.ಎಂ. ಮಹೇಂದ್ರ, ಡಾ. ಕವಿತಾ ಹಿರೇಮಠ, ಡಾ. ಪ್ರಕಾಶ ಬಾಳಿಕಾಯಿ, ಡಾ.ಮಲ್ಲಿಕಾರ್ಜುನ ಆನಂದಳ್ಳಿ, ಇತರರು ಇದ್ದರು.
ವಿಜಯಲಕ್ಷೀ ದಾನರಡ್ಡಿ ಸ್ವಾಗತಿಸಿದರು. ಪ್ರೊ. ಗಣೇಶ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಾ ಪಾಟೀಲ ನಿರೂಪಿಸಿದರು. ಡಾ.ಸಂಜೀವ ರಾಯಪ್ಪ ವಂದಿಸಿದರು.