

ನರಗುಂದ: ತಾಲೂಕಿನ ಕುರುಗೋವಿನಕೊಪ್ಪ ಗ್ರಾಮಸ್ಥರು ಶುಕ್ರವಾರ ಕತ್ತೆಗಳ ಮದುವೆ ಮಾಡಿಸಿದ್ದಾರೆ. ಇದಕ್ಕಾಗಿ ಆಮಂತ್ರಣ ಪತ್ರಿಕೆ ಮುದ್ರಿಸಿ ಗ್ರಾಮಸ್ಥರನ್ನು ಮದುವೆಗೆ ಆಹ್ವಾನಿಸಲಾಗಿತ್ತು.
ಮುಂಗಾರು ಮಳೆ ನಿರೀಕ್ಷೆಯಲ್ಲಿ ತಾಲೂಕಿನ ಬಹುತೇಕ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಮಳೆಯಿಲ್ಲದೆ ಬೆಳೆಗಳೆಲ್ಲವೂ ಕಮರುತ್ತಿವೆ. ರೈತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೂ ಇದುವರೆಗೆ ಮಳೆ ಸುರಿದಿಲ್ಲ. ಕತ್ತೆ ಮದುವೆ ಮಾಡಿದರೆ ಮಳೆ ಬರುತ್ತದೆಂಬ ನಂಬಿಕೆಯಿಂದ ಕುರುಗೋವಿನಕೊಪ್ಪ ಗ್ರಾಮಸ್ಥರು ಮದುವೆಗೆ ಮುಂಚೆ ಎಲ್ಲರಿಗೂ ಆಮಂತ್ರಣ ಪತ್ರಿಕೆ ಹಂಚಿ ಕತ್ತೆಗಳ ಮದುವೆ ಮಾಡಿದರು.
ಗ್ರಾಮದ ಪ್ರತಿಯೊಬ್ಬರನ್ನು ಮದುವೆಗೆ ಆಹ್ವಾನಿಸಲಾಗಿತ್ತು. ಹನುಮಂತದೇವರ ದೇವಸ್ಥಾನದಲ್ಲಿ ಬೆಳಗ್ಗೆ ಕತ್ತೆಗಳಿಗೆ ಸ್ನಾನ ಅರಿಸಿಣದ ನೀರಿನಿಂದ ಸ್ನಾನ ಮಾಡಿಸಿ, ಹಣೆಗೆ ಬಾಸಿಂಗ್ ಕಟ್ಟಿ, ಹೆಣ್ಣು ಕತ್ತೆಗೆ ಸೀರೆ, ಗಂಡು ಕತ್ತೆಗೆ ದೋತ್ರ, ಪಂಚೆ ಸಮವಸ್ತ್ರಗಳನ್ನು ತೊಡಿಸಿ ಶುಭ ಮುಹೂರ್ತದಲ್ಲಿ ಶೇಖರಯ್ಯ ಹಿರೇಮಠ ಅವರಿಂದ ವೇದ, ಉಪನಿಷತ್ತುಗಳ ಮಂತ್ರ ಜಪಿಸಿ ಸಾವಿರಾರು ಜನರ ಸಮ್ಮುಖದಲ್ಲಿ ಮದುವೆಶಾಸ್ತ್ರ ನೆರವೇರಿಸಲಾಯಿತು. ಇದಕ್ಕೂ ಮುನ್ನ ಬಸ್ ನಿಲ್ದಾಣದಿಂದ ಭಾವಿಕಟ್ಟೆ ವರೆಗೆ ಡಿಜೆ, ಡೊಳ್ಳು, ಜಾಂಜ್, ಕರಡಿ ಮಜಲು ಸಹಿದ ನವಜೋಡಿಯ ಮೆರವಣಿಗೆ ಮಾಡಲಾಯಿತು. ಮದುವೆಗೆ ಬಂದವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.