

ಜಗಳೂರು: ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಮಾ.15 ರಿಂದ ಐದು ದಿನ ಶರಣ ಬಸವೇಶ್ವರ ದಾಸೋಹ ಮಠದಿಂದ ದಾಸೋಹ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಉತ್ಸವದ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾಸೋಹ ಸಂಸ್ಕೃತಿ ಉತ್ಸವ ಉದ್ಘಾಟನೆಯಂದು ಸಮಗ್ರ ನೀರಾವರಿಗಾಗಿ ರೈತರ ಸಮಾವೇಶ ನಡೆಯಲಿದ್ದು, ಸಾನ್ನಿಧ್ಯವನ್ನು ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷರಾದ ಮಲ್ಲಿಕಾರ್ಜುನ ದೇವರು ವಹಿಸಲಿದ್ದಾರೆ. ಧ್ವಜಾರೋಹಣವನ್ನು ಮುರುಘರಾಜೇಂದ್ರ ಬೃಹನ್ಮಠದ ಡಾ. ಬಸವಕುಮಾರ ಸ್ವಾಮೀಜಿ ನೆರವೇರಿಸಲಿದ್ದಾರೆ. ದಾಮ ಐಮಡಿ ಶರಣಾರ್ಯರು ಉಪಸ್ಥಿತರಿರಲಿದ್ದಾರೆ. ಶಾಸಕ ಬಿ. ದೇವೇಂದ್ರಪ್ಪ ಅಧ್ಯಕ್ಷತೆ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಲಿದ್ದಾರೆ.
ಸಂಸದ ಗೋವಿಂದ ಕಾರಜೋಳ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಬಳ್ಳಾರಿ ಸಂಸದ ಈ. ತುಕಾರಾಂ, ಶಾಸಕರಾದ ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಡಾ.ಎನ್.ಟಿ. ಶ್ರೀನಿವಾಸ್, ಮಾಜಿ ಶಾಸಕ ಎಚ್.ಪಿ. ರಾಜೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್, ಚಿಂತಕ ಜೆ. ಯಾದವರೆಡ್ಡಿ, ಜನಪರ ಹೋರಾಟಗಾರ ನಾಗಲಿಂಗಪ್ಪ, ಜೆ. ಬಸವರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಮಾ.16 ರಂದು ಉಚಿತ ಸರಳ ಸಾಮೂಹಿಕ ವಿವಾಹ ಮತ್ತು ಮಹಿಳಾ ಸಬಲೀಕರಣ ಸಮಾವೇಶ, ಮಾ.17 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಾ.22 ಮತ್ತು 23 ರಂದು ಕೃತಕ ಪೂರ್ಣ ದಂತ ಪಂಕ್ತಿ ಜೋಡಣಾ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪಾಂಶುಪಾಲ ನಾಗಲಿಂಗಪ್ಪ, ಶಿವನಗೌಡ, ಚಿಂತಕ ಅಶೋಕ್ ಸಂಗೇನಹಳ್ಳಿ, ಹಿರಿಯ ಮುಖಂಡ ಬಸವರಾಜಪ್ಪ, ವಿಎಸ್ಎಸ್ಎನ್ ಅಧ್ಯಕ್ಷ ಕೆ. ಗುರುಮೂರ್ತಿ, ರೈತ ಮುಖಂಡ ಕುಮಾರ್ ಭರಮಸಮುದ್ರ, ಮುಖಂಡರಾದ ಶರಣಪ್ಪ, ಮಂಜುನಾಥ್ ಸೇರಿ ಮತ್ತಿತರರಿದ್ದರು.