ನರೇಗಾ ಯೋಜನೆಯಡಿ ಕೂಲಿ ಕೊಡಿ

12 JLR
Published on

ಜಗಳೂರು: ನರೇಗಾ ಯೋಜನೆಯಡಿ ನಿರಂತರ ಕೂಲಿ ಕೆಲಸ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಗ್ರಾಮೀಣ ಕೂಲಿ ಕಾರ್ವಿುಕರ ಸಂಘಟನೆ ನೇತೃತ್ವದಲ್ಲಿ ದೊಣೆಹಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.

ದೊಣೆಹಳ್ಳಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಮಹಿಳಾ ಕೂಲಿಕಾರ್ವಿುಕರು, ಸ್ಥಳದಲ್ಲಿ ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಪಿಡಿಒ ಕೊಟ್ರೇಶ್ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಸಂಚಾಲಕಿ ಪಲ್ಲಾಗಟ್ಟೆ ಸುಧಾ ಮಾತನಾಡಿ, ದೊಣೆಹಳ್ಳಿ ಗ್ರಾಪಂ ಪಿಡಿಒ ಕೊಟ್ರೇಶ್ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕೂಲಿ ಕೇಳಲು ಬಂದರೆ ನಿರ್ಲಕ್ಷ್ಯ ತೋರಿದ್ದಾರೆ. ಜನಸಾಮಾನ್ಯರ ಕೈಗೆ ಸಿಗದೆ ರಾಜಕೀಯ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.

ಕೂಲಿ ಕಾರ್ವಿುಕರಿಗೆ ನಿರಂತರ ಕೆಲಸ ಕೊಡುತ್ತಿಲ್ಲ. ನಮೂನೆ-6 ಫಾರಂ ನೀಡಿದ 15 ದಿನಗಳಲ್ಲಿ ಕಾನೂನಿನ ಪ್ರಕಾರ ಕೆಲಸ ಕೊಡಬೇಕು. ಇಲ್ಲವಾದರೆ ನಿರುದ್ಯೋಗಿ ಭತ್ಯೆ ಮತ್ತು ಕೂಲಿ ಭತ್ಯೆಗೆ ಫಾರಂ ನೀಡಬೇಕು ಹಾಗೂ ಕಳೆದ 14 ವರ್ಷಗಳಿಂದ ಕಡಿಮೆ ಕೂಲಿ ಪಾವತಿಸುತ್ತಿದ್ದಾರೆ. ಇಷ್ಟೆಲ್ಲ ಗೊತ್ತಿದ್ದರೂ ಪಿಡಿಒ ಕಾರ್ವಿುಕರನ್ನು ನಿರ್ಲಕ್ಷಿಸುತ್ತಿದ್ದಾರೆ.

ಮೇಟಿಗಳಿಗೆ ಗೌರವಯುತ ಕೂಲಿ ಕೊಡುತ್ತಿಲ್ಲ. 6 ಕಿ.ಮೀ ದೂರ ಕಾರ್ವಿುಕರನ್ನು ಕೆಲಸಕ್ಕೆ ಕಳುಹಿಸುತ್ತಿದ್ದು ಇದುವರೆಗೂ ಪ್ರಯಾಣದ ವೆಚ್ಚ ಹಾಕಿಲ್ಲ, ಮೇಟಿ ಚಾರ್ಜ್ ಕೊಡಲು ಎಸ್ಟಿಮೇಟ್​ನಲ್ಲಿ ಪ್ರಾವಿಜನ್ ಮಾಡದೇ ತೊಂದರೆ ಮಾಡುತ್ತಿದ್ದಾರೆ. ಎಲ್ಲ ಸಮಸ್ಯೆಗಳು ಕೂಡಲೇ ಇತ್ಯರ್ಥವಾಗಬೇಕು. ಕಾನೂನನ್ನು ಉಲ್ಲಂಘಿಸಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಶಶಿಕಲಾ, ಬೋರಪ್ಪ, ಓಬಳೇಶ್, ಮಾಲಾಶ್ರೀ, ದುರುಗಮ್ಮ, ಮಂಜುಳಾ, ಬಸಮ್ಮ, ಚೌಡಮ್ಮ ಮತ್ತಿತರರು ಭಾಗವಹಿಸಿದ್ದರು.

ಕೂಲಿಕಾರರ ಬೇಡಿಕೆಗಳು: ತಾಲೂಕಿನ ದಿದ್ದಿಗಿ, ಕೆಚ್ಚೇನಹಳ್ಳಿ, ಪಲ್ಲಾಗಟ್ಟೆ, ಬಿಳಿಚೋಡು ಸೇರಿ 22 ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರ ಕೂಲಿ ಕೆಲಸ ನೀಡಬೇಕು. ಎನ್​ಎಂಆರ್ ತೆಗೆದು ಒಂದು ವಾರದೊಳಗೆ ಖಾತೆಗಳಿಗೆ ಹಣ ಜಮೆ ಮಾಡಬೇಕು. ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ವರ್ಷವಿಡೀ ಕೆಲಸ ಕೊಡಬೇಕು. ಮಾನವ ದಿನಗಳನ್ನು ಹೆಚ್ಚಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ನರೇಗಾ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಮೇಟಿ ಮತ್ತು ಕೂಲಿಕಾರರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂಬುದು ಕೂಲಿ ಕಾರ್ವಿುಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net