ದೊಂಡಂಬಳಿ ಗ್ರಾಮದಲ್ಲಿ ಯಂತ್ರ-ಮಂತ್ರದ ಕಲ್ಲು ಪತ್ತೆ, ಸಂಶೋಧಕ ಡಾ.ಚನ್ನಬಸವ ಮಲ್ಕಂದಿನ್ನಿ ಶೋಧ

Devadurga Rural Yantra-Mantra Stone
Published on

ದೇವದುರ್ಗ ಗ್ರಾಮೀಣ: ತಾಲೂಕಿನ ದೊಂಡಂಬಳಿ ಗ್ರಾಮದಲ್ಲಿ ಇತಿಹಾಸ ಉಪನ್ಯಾಸಕ, ಸಂಶೋಧಕ ಡಾ.ಚನ್ನಬಸವ ಮಲ್ಕಂದಿನ್ನಿ ಯಂತ್ರ-ಮಂತ್ರ ತಾಳೆ ಹಾಕುವ ಕಲ್ಲು ಇತ್ತೀಚೆಗೆ ಪತ್ತೆ ಮಾಡಿದ್ದಾರೆ. ಗ್ರಾಮದ ಕೃಷ್ಣಾ ನದಿ ತೀರದ ಜಮೀನೊಂದರಲ್ಲಿ ಪತ್ತೆ ಆಗಿರುವ ನಾಲ್ಕು ಸಾಲಿನ ಬಿಳಿಕಣ ಶಿಲೆಯ ಕಲ್ಲು ಸಂಶೋಧಿಸಿ ವ್ಯಾಖ್ಯಾನಿಸಿದ್ದಾರೆ. ಅಥರ್ವಣ ವೇದದಲ್ಲಿ ಪರಮೇಶ್ವರ ಪಾರ್ವತಿ ದೇವಿಗೆ ನಿರೂಪಿಸಿದ್ದಾನೆ. ಇದನ್ನು ಅಗ್ನಿ ದೇವರು ಅರ್ಥೈಸಿಕೊಂಡು ಮಹಾಮುನಿ ವಶಿಷ್ಟ ಮಹರ್ಷಿಗಳು ಬಳಕೆಗೆ ತಂದಿದ್ದಾರೆ. ಅಥರ್ವಣವೇದ ಕಲ್ಲು ಸಾಮಾನ್ಯರ ನಂಬಿಕೆಗಳನ್ನು ಪ್ರತಿಬಿಂಬಿಸುವ ಯಂತ್ರ ಮಂತ್ರ ಮೋಡಿ ಮಾಡುವ ವಿದ್ಯೆ ಒಳಗೊಂಡಿದೆ ಎಂದು ವಿಶ್ಲೇಷಿಸಿದ್ದಾರೆ.

ಗ್ರಾಮದಲ್ಲಿ ಪತ್ತೆ ಆಗಿರುವ ಚಪ್ಪಡಿ ಕಲ್ಲು ಕ್ರಿ.ಶ. 19-20ನೇ ಶತಮಾನದ್ದು. ಇದು ಎಡಗಡೆಯಿಂದ ಬಲಭಾಗಕ್ಕೆ ನಾಲ್ಕು ಸಾಲಿನಲ್ಲಿ ಸಂಖ್ಯೆ ಕೂಡಿಸಿದರೆ ಒಟ್ಟು 24 ಬರುತ್ತದೆ. ಹಾಗೆಯೇ ಮೇಲ್ಭಾಗದಿಂದ ಕೆಳಭಾಗಕ್ಕೆ ನಾಲ್ಕು ಸಾಲಿನ ಅಂಕಿಗಳನ್ನು ಕೂಡಿಸಿದರೆ ಒಟ್ಟು 24 ಬರುತ್ತದೆ. ಇದು ಬಹುಶಃ ಹಿಂದೆ ಜಂಗಮರ ಜಮೀನು ಆಗಿರಬೇಕು. ಕಲ್ಲು ಪತ್ತೆ ಆಗಿರುವ ಜಮೀನು ನದಿ ತೀರದಲ್ಲಿ ಇದೆ. ಇಲ್ಲಿಗೆ ಬೇರೆಬೇರೆ ಕಡೆಯಿಂದ ಸ್ನಾನಕ್ಕೆ ಬರುತ್ತಿದ್ದ ಜಂಗಮರು ಪರ್ವ, ಅಮಾವಾಸ್ಯೆಗಳ ಕಾಲದಲ್ಲಿ ಹೊಳೆಯಲ್ಲಿ ಸ್ನಾನಮಾಡಿ ಯಂತ್ರ ಕಲ್ಲು ನೋಡುವುದರಿಂದ ಮತ್ತು ಪೂಜೆ ಮಾಡುವುದರಿಂದ ಜನರಿಗೆ ಪುಣ್ಯ ಪ್ರಾಪ್ತಿಯಾಗಲಿ ಎಂಬ ಉದ್ದೇಶದಿಂದ ಹಾಕಿಸಿರಬಹುದು ಎಂದು ಇನ್ನೊಂದು ಅರ್ಥದಲ್ಲಿ ಸಂಶೋಧಕರು ಅರ್ಥೈಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net