ರಾಮ ಮಂದಿರ ನಿರ್ಮಾಣಕ್ಕೆ ಜನರಿಂದ ದೇಣಿಗೆ

h3-Keshav Hegde
Published on

ಹುಬ್ಬಳ್ಳಿ: ಭಕ್ತರಿಂದ ಸಂಗ್ರಹಿಸಿದ ಹಣದಿಂದಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಇದಕ್ಕಾಗಿ ದೇಶಾದ್ಯಂತ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ವಿಶ್ವ ಹಿಂದು ಪರಿಷತ್ (ವಿಎಚ್​ಪಿ) ಮುಂದಾಗಿದೆ. ಈ ನಿಟ್ಟಿನಲ್ಲಿ ಜ. 15 ರಿಂದ ಫೆ. 27ರವರೆಗೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಮಹಾಅಭಿಯಾನ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್​ಪಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಈ ಮಾಹಿತಿ ನೀಡಿದರು.

ರಾಮ ಭಕ್ತರಿಂದ ಸಂಗ್ರಹಿಸಿದ ಹಣದಿಂದ ಶ್ರೀರಾಮ ಮಂದಿರ ನಿರ್ವಿುಸಲು ತೀರ್ವನಿಸಲಾಗಿದೆ. ಯಾವುದೇ ಜಾತಿ ಭೇದ ಇಲ್ಲದೆ ದೇಣಿಗೆ ನೀಡಬಹುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಜ. 15 ರಿಂದ ಫೆ. 5ರವರೆಗೆ ಮಾತ್ರ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ. ದೇಶದಲ್ಲಿ 6.5 ಲಕ್ಷ ಗ್ರಾಮಗಳಿದ್ದು, ಸುಮಾರು 4.5 ಲಕ್ಷ ಗ್ರಾಮಗಳಿಗೆ ಭೇಟಿ ನೀಡುವ ಸಂಕಲ್ಪ ಇದೆ. ದೇಶಾದ್ಯಂತ ಇರುವ 22 ಕೋಟಿ ಕುಟುಂಬಗಳ ಪೈಕಿ 11 ಕೋಟಿ ಕುಟುಂಬಗಳನ್ನು ನಿಧಿ ಸಂಗ್ರಹಕ್ಕಾಗಿ ತಲುಪುವ ಗುರಿ ಇದೆ. ರಾಜ್ಯದಲ್ಲಿರುವ ಎಲ್ಲ 27500 ಗ್ರಾಮಗಳ 90 ಲಕ್ಷ ಮನೆಗಳನ್ನು 20 ದಿನಗಳಲ್ಲಿ ತಲುಪುವ ಉದ್ದೇಶ ಇದೆ. ಇದಕ್ಕಾಗಿ, ಶ್ರೀರಾಮ ಮಂದಿರ ನಿರ್ವಣದ ವಿವರಗಳುಳ್ಳ ಸುಮಾರು 50 ಲಕ್ಷ ಕರಪತ್ರಗಳನ್ನು ಮುದ್ರಿಸಿ, ಹಂಚಲಾಗುವುದು ಎಂದು ಹೇಳಿದರು.

ನಿಧಿ ಸಂಗ್ರಹಕ್ಕಾಗಿ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶ್ರೀರಾಮ ಜನ್ಮಭೂಮಿ ಟ್ರಸ್ಟ್​ನ ವಿಶ್ವಸ್ತರಲ್ಲಿ ಒಬ್ಬರಾಗಿದ್ದಾರೆ. ಸಾಧು-ಸಂತರು ಅಭಿಯಾನದ ಕುರಿತು ಮಾತನಾಡಲಿದ್ದಾರೆ ಎಂದರು.

ಹತ್ತು, ನೂರು ಹಾಗೂ ಸಾವಿರ ರೂಪಾಯಿಯ ಮುದ್ರಿತ ಕೂಪನ್​ಗಳ ಸಹಾಯದಿಂದ ಧನಸಂಗ್ರಹ ನಡೆಯಲಿದೆ. 2 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು. ಆನ್​ಲೈನ್ ಮೂಲಕವೂ ದೇಣಿಗೆ ಸಂಗ್ರಹ ನಡೆಯಲಿದೆ. ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದಾಗಿದೆ. ಮಹಾಅಭಿಯಾನದ ಅವಧಿ ಪೂರ್ಣಗೊಂಡ ನಂತರವೂ ಭಕ್ತರು ದೇಣಿಗೆ ನೀಡಲು ಆನ್​ಲೈನ್ ಮೂಲಕ ಅವಕಾಶವಿದೆ ಎಂದು ಹೇಳಿದರು.

ಸಂಗ್ರಹಗೊಂಡ ಎಲ್ಲ ಹಣವನ್ನು 48 ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್​ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ದೇಣಿಗೆ ಸಂಗ್ರಹಿಸುವ ಪ್ರತಿ ಕಾರ್ಯಕರ್ತರಿಗೆ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಬರೋಡಾ ಅಥವಾ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ನೋಂದಣಿ ಸಂಖ್ಯೆ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಶ್ರೀರಾಮ ಮಂದಿರ ನಿಧಿ ಸಮರ್ಪಣ ಮಹಾಅಭಿಯಾನ ರಾಜ್ಯ ಸಮಿತಿ ಸದಸ್ಯ ರಾಮನಗೌಡರ, ಮಹಾಅಭಿಯಾನದ ರಾಜ್ಯ ಸಹ ಕಾರ್ಯದರ್ಶಿ ಕೃಷ್ಣ ಜೋಶಿ, ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ಉಪಸ್ಥಿತರಿದ್ದರು.

ವಿಶಿಷ್ಟ ನಿರ್ವಣ: ಸಂಪೂರ್ಣ ಮಂದಿರವು ಕಲ್ಲಿನ ಬ್ಲಾಕ್ ಮೂಲಕ ನಿರ್ವಣಗೊಳ್ಳಲಿದೆ. ಮಂದಿರದ ವಿಸ್ತೀರ್ಣ 2.7 ಎಕರೆ. 54 ಸಾವಿರ ಚದರ ಅಡಿ ಜಾಗದಲ್ಲಿ ಮಂದಿರ ನಿರ್ವಣಗೊಳ್ಳಲಿದೆ. 360 ಅಡಿ ಉದ್ದ ಹಾಗೂ 235 ಅಡಿ ಅಗಲದ ಮಂದಿರದಲ್ಲಿ 3 ಅಂತಸ್ತು ಹಾಗೂ 5 ಮಂಟಪಗಳಿರುತ್ತವೆ. ನೆಲಮಾಳಿಗೆಯಲ್ಲಿ 160 ಕಂಬಗಳು, ಮೊದಲ ಮಹಡಿಯಲ್ಲಿ 132 ಕಂಬಗಳು, 2ನೇ ಮಹಡಿಯಲ್ಲಿ 74 ಕಂಬಗಳಿರುತ್ತವೆ. ಮಂದಿರ ನಿರ್ವಣದ ಜತೆಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದಪಾಠ ಶಾಲೆ, ಸತ್ಸಂಗ ಭವನ, ಧರ್ಮಶಾಲೆ, ಗೋಶಾಲೆ ಮತ್ತಿತರ ಸೌಲಭ್ಯಗಳು ನಿರ್ವಣಗೊಳ್ಳಲಿವೆ.

ಸಮಿತಿಯಲ್ಲಿ ಹಲವು ಗಣ್ಯರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾಅಭಿಯಾನದ ಕರ್ನಾಟಕ ಸಮಿತಿ ರಚನೆಯಾಗಿದ್ದು, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಚಾಮರಾಜನಗರ ಸೇವಾಭಾರತಿ ಶಾಲೆಯ ಅಧ್ಯಕ್ಷ ಮ. ವೆಂಕಟರಾಮು, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿವೃತ್ತ ನಿರ್ದೇಶಕಿ ಡಾ. ವಿಜಯಲಕ್ಷ್ಮೀ ದೇಶಮಾನೆ, ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಮೊದಲಾದ ಗಣ್ಯರನ್ನು ಈ ಸಮಿತಿ ಒಳಗೊಂಡಿದೆ.

ಅಯೋಧ್ಯೆ ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ದೇಶ, ವಿದೇಶಗಳಿಂದ ಭಕ್ತರು ಆಗಮಿಸುವುದರಿಂದ ಸಾರಿಗೆ, ರೈಲು, ವಿಮಾನ ಸೇರಿದಂತೆ ಹಲವಾರು ಸೌಲಭ್ಯಗಳು ನಿರ್ವಣಗೊಳ್ಳಲಿವೆ.| ಕೇಶವ ಹೆಗಡೆವಿಶ್ವ ಹಿಂದು ಪರಿಷತ್​ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net