

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಡುಪಿ ಭಾರತೀಯ ಜೀವ ವಿಮಾ ನಿಗಮ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದೊಂದಿಗೆ ವಿಮಾ ಗ್ರಾಮ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಂಜೂರಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೇಂದ್ರ ಕಚೇರಿಯ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲಿಯಾನ್ ಮಂಗಳವಾರ ಉದ್ಘಾಟಿಸಿದರು.
ಉಡುಪಿ ಎಲ್‌ಐಸಿ ವಿಭಾಗೀಯ ಕಚೇರಿ ಮೈಕ್ರೋ ಇನ್ಶೂರೆನ್ಸ್ ಪ್ರಬಂಧಕ ದಿನೇಶ್ ಪ್ರಭು ಎಲ್‌ಐಸಿಯ ಧ್ಯೇಯೋದ್ದೇಶ, ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಶಂಸಿ ಯೋಜನೆಯೊಂದಿಗೆ ಜತೆಗೂಡಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಧರ್ಮಸ್ಥಳ ಪೊಲೀಸ್ ಠಾಣೆ ಅಧಿಕಾರಿ ಕಿಶೋರ್ ಠಾಣೆ ಸಿಬ್ಬಂದಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ಮೂಲಸೌಕರ್ಯ ಒದಗಿಸಿ ಕೊಟ್ಟದ್ದಕ್ಕಾಗಿ ಎಲ್‌ಐಸಿ, ಯೋಜನೆಗೆ ಕೃತಜ್ಞತೆ ತಿಳಿಸಿದರು.
ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಿದ್ದು, ಸಮಾಜದಲ್ಲಿ ಒಗ್ಗಟ್ಟು ಮೂಡಿದೆ. ಡಾ.ಹೆಗ್ಗಡೆ ಅವರ ದೂರದೃಷ್ಟಿಯ ಕಾರ್ಯಕ್ರಮಗಳಿಂದ ಇಡೀ ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರುವಾಸಿಯಾಗಿದೆ ಎಂದು ತಿಳಿಸಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಿದ ಎಲ್‌ಐಸಿಗೆ ಗ್ರಾಮದ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು.
ಧರ್ಮಸ್ಥಳ ಠಾಣಾಧಿಕಾರಿ ಸಮರ್ಥ್, ಕೇಂದ್ರ ಕಚೇರಿ ಯೋಜನಾಧಿಕಾರಿ ಸತೀಶ್ ಎಂ., ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಉಪಸ್ಥಿತರಿದ್ದರು. ವಿಮಾ ಸಮನ್ವಯಾಧಿಕಾರಿ ಹೇಮಲತಾ ಹೆಗಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಸಿಬ್ಬಂದಿ ಚೈತ್ರಾ ವಂದಿಸಿದರು.