ಸಾರ್ವಜನಿಕ ರಸ್ತೆಗೆ ಭೂಮಿ ದಾನ

11 09 2025_BGR RURAL_PAGE_02
Published on

ದಾಬಸ್​ಪೇಟೆ: ನೀಡವಂದ ಗ್ರಾಮದ ಪುಟ್ಟೇಗೌಡ ಕುಟುಂಬ ಮತ್ತು ಚೇರ್ಮನ್​ ಕೆಂಪೇಗೌಡ ಕುಟುಂಬದವರು ಅವರದೇ ಜಮೀನಿನಲ್ಲಿ 15 ಅಡಿ ಜಾಗವನ್ನು ಸಾರ್ವಜನಿಕ ರಸ್ತೆಗೆ ದಾನವಾಗಿ ನೀಡುವ ಮೂಲಕ ಪ್ರಾಣಪಣಕ್ಕಿಟ್ಟು ರೈಲ್ವೇ ಹಳಿ ದಾಟುವ ಸಾರ್ವಜನಿಕರ ಸಂಕಷ್ಟವನ್ನು ದೂರ ಮಾಡಿದ್ದಾರೆ.

ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಲ್ಲಿ ರೈಲ್ವೆ ಇಲಾಖೆ ನಡೆಸಿರುವ ಭೂಸ್ವಾಧಿನ ಪ್ರಕ್ರಿಯೆ 3 ಗ್ರಾಮಗಳ ಜನರ ಪ್ರಾಣಕ್ಕೆ ಉರುಳಾಗಿ ಪರಿಣಮಿಸಿದೆ. ಸಾರ್ವಜನಿಕ ರಸ್ತೆ ಸ್ವಾಧಿನದಿಂದಾಗಿ ಮೂರು ಗ್ರಾಮಗಳ ಜನರು ಪ್ರತಿನಿತ್ಯ ರೈಲ್ವೆ ಹಳಿ ದಾಟುವುದು ಅನಿವಾರ್ಯವಾಗಿದ್ದು, ಪ್ರಾಣವನ್ನು ಪಣಕ್ಕಿಡುವಂತಾಗಿದೆ. ಶಾಲೆಗಳಿಗೆ ಹೋಗುವ ಪುಟ್ಟಮಕ್ಕಳು ಸೇರಿ ಹಿರಿಯ ನಾಗರಿಕರು ಪ್ರತಿದಿನ ಪ್ರಾಣಭೀತಿ ಎದುರಿಸುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು.

ಪರ್ಯಾಯ ರಸ್ತೆಗೆ ಸೂಚನೆ: ಶಾಸಕ ಎನ್​.ಶ್ರೀನಿವಾಸ್​ ನೆಲಮಂಗಲ ತಹಸೀಲ್ದಾರ್​ ಮಲ್ಲೇಶ್​ಬೀರಪ್ಪ ಹಾಗೂ ಮುಖಂಡ ಕೆ.ಗೋವಿಂದರಾಜ್​ ಗಮನಕ್ಕೆ ತಂದು ಪರ್ಯಾಯ ರಸ್ತೆ ಮಾಡಲು ಸೂಚನೆ ನೀಡಿದ್ದರು, ಹೀಗಾಗಿ ಅಲ್ಪಯ್ಯನಪಾಳ್ಯ, ರಾಜನಪಾಳ್ಯ, ಹೊಸಹಳ್ಳಿಪಾಳ್ಯ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳು ಸ್ಥಳಿಯರೊಂದಿಗೆ ಮಾತುಕತೆ ನಡೆಸಿದ್ದರು.

ಸಮಗ್ರ ವರದಿಗೆ ಸ್ಪಂದನೆ : ಪ್ರಾಣಪಣಕ್ಕಿಟ್ಟು ರೈಲ್ವೆ ಹಳಿ ದಾಟುವ ಸ್ಥಿತಿ ಶೀರ್ಷಿಕೆಯಡಿ ವಿಜಯವಾಣಿ ಅ.31ರಂದು ವಿಸ್ತಾರವಾಗಿ ವರದಿ ಪ್ರಕಟಿಸಿತ್ತು. ರೈಲ್ವೆ ಇಲಾಖೆ ಭೂಸ್ವಾಧಿನದಿಂದ ಮೂರು ಗ್ರಾಮಗಳ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಇದೀಗ ನಿಡವಂದ ಗ್ರಾಮದ ಪುಟ್ಟೇಗೌಡ ಕುಟುಂಬ ಮತ್ತು ಚೇರ್ಮನ್​ ಕೆಂಪೇಗೌಡ ಕುಟುಂಬದವರು ತಮ್ಮ ಜಮೀನಿನಲ್ಲಿ ರಸ್ತೆಗೆ ಜಾಗ ಬಿಟ್ಟುಕೊಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net