

ಮದ್ದೂರು: ಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಶಾಸಕ ಕೆ.ಎಂ.ಉದಯ್ ನಿವೇಶನ ದಾನ ನೀಡಿರುವುದು ಮೆಚ್ಚುಗೆಯ ವಿಷಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ನಿವೇಶನ ನೋಂದಣಿ ಮಾಡಿಸಿಕೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರ ಈ ಕಾರ್ಯ ಮಾದರಿಯಾಗಿದ್ದು, ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇಷ್ಟರಲ್ಲೇ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರುತ್ತಾರೆ. ಮೊದಲ ಹಂತದಲ್ಲಿ ಈಗಾಗಲೇ ನೋಂದಣಿಯಾಗಿರುವ ರಾಜ್ಯದ ವಿವಿಧ 100 ತಾಲೂಕುಗಳಲ್ಲಿ ಪಕ್ಷದ ನೂತನ ಕಚೇರಿಗಳ ಶಂಕುಸ್ಥಾಪನೆಗೆ ವರ್ಚುಯಲ್ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಪಟ್ಟಣದ ಐಬಿ ವೃತ್ತದ ಬಳಿ 5445 ಅಡಿ ವಿಸ್ತೀರ್ಣದ (5 ಗುಂಟೆ) ಜಾಗವನ್ನು ಖರೀದಿಸಿದ್ದು, ಅದನ್ನು ಪಕ್ಷದ ಕಚೇರಿಯ ನಿರ್ಮಾಣಕ್ಕೆಂದು ದಾನ ನೀಡಲಾಗಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಉಪನೋಂದಣಿ ಕಚೇರಿಗೆ ಆಗಮಿಸುವ ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಡಿ.ಕೆ. ಡಿ.ಕೆ. ಎಂದು ಜಯಘೋಷ ಕೂಗಿದರು.
ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್, ತಹಸೀಲ್ದಾರ್ ಸ್ಮಿತಾ, ತಿಮ್ಮದಾಸ್ ಗ್ರೂಪ್ ಮಾಲೀಕ ಸಿ.ಟಿ.ಶಂಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್ ಸೇರಿದಂತೆ ಇತರರಿದ್ದರು.