ಗಜಾನನ ಯುವಕ ಸಂಘ ಸದಸ್ಯರಿಂದ ಶ್ರಮದಾನ

swacchathe
Published on

ಮಡಿಕೇರಿ: ಭಾಗಮಂಡಲದಲ್ಲಿನ ಗಜಾನನ ಯುವಕ ಸಂಘದ ವತಿಯಿಂದ ಭಗಂಡೇಶ್ವರ ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಶುಚಿಗೊಳಿಸಲಾಯಿತು.

ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ದೇವಾಲಯದ ಆವರಣದಲ್ಲಿ ಹಾವಸೆ(ಪಾಚಿ) ನಿರ್ಮಾಣವಾಗಿತ್ತು. ಇದರಿಂದಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರು ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕುವಾಗ ಜಾರುವ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಇಲ್ಲಿನ ಅರ್ಚಕರು ಇತ್ತೀಚೆಗೆ ಯುವಕ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಯುವಕ ಸಂಘದ ಸದಸ್ಯರು ಸೋಮವಾರ ಕಾರ್ಯಪ್ರವೃತ್ತರಾಗಿ ಆವರಣವನ್ನು ಶುಚಿಗೊಳಿಸಿದರು. ಸುಣ್ಣ ಪುಡಿ, ಬ್ಲೀಚಿಂಗ್ ಪೌಡರ್ ಹಾಕಿ ನೆಲದಲ್ಲಿದ್ದ ಹಾವಸೆಯನ್ನು ತೆರವುಗೊಳಿಸಿದರು. ಸಂಘದ ಅಧ್ಯಕ್ಷ ಗೌರೀಶ್ ರೈ ನೇತೃತ್ವದಲ್ಲಿ ನಡೆದ ಈ ಸ್ವಚ್ಛತಾ ಕಾರ್ಯದಲ್ಲಿ ೧೪ ಸದಸ್ಯರು ಪಾಲ್ಗೊಂಡಿದ್ದರು.

ಈ ಬಗ್ಗೆ ಮಾತನಾಡಿದ ದೇವಾಲಯದ ಅರ್ಚಕ ಹರೀಶ್ ಭಟ್, ಆವರಣದಲ್ಲಿ ನೆಲ ಜಾರುತ್ತಿದ್ದ ಪರಿಣಾಮ ಹೊರ ಜಿಲ್ಲೆಯಿಂದ ಬಂದ ಕೆಲವು ಭಕ್ತರು ಜಾರಿ ಬಿದ್ದಿದ್ದರು. ಜು.೨೪ಕ್ಕೆ ಕ್ಷೇತ್ರದಲ್ಲಿ ಪೊಲಿಂಕಾನ ಉತ್ಸವ ಕೂಡಾ ಇದ್ದು, ಈ ಹಿನ್ನೆಲೆಯಲ್ಲಿ ಆವರಣವನ್ನು ಸ್ವಚ್ಛಗೊಳಿಸುವ ಅಗತ್ಯವಿತ್ತು. ಈ ಬಗ್ಗೆ ಸಂಘದ ಗಮನಕ್ಕೆ ತಂದಿದ್ದೆ. ಯುವಕರು ಮಳೆಯನ್ನೂ ಲೆಕ್ಕಿಸದೆ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಈ ತಂಡದ ಸಾಮಾಜಿಕ ಕಾರ್ಯ ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net