ತನಾಲ್ ಆಶ್ರಮಕ್ಕೆ ಗಾಲಿ ಖುರ್ಚಿ ಕೊಡುಗೆ

weel chair
Published on

ಮಡಿಕೇರಿ: ಮಡಿಕೇರಿ ನಗರದ ತನಾಲ್ ಆಶ್ರಮಕ್ಕೆ ರೋಟರಿ ಮಡಿಕೇರಿ ವುಡ್ಸ್‌ನಿಂದ ಗಾಲಿ ಖುರ್ಚಿಯನ್ನು ಆಶ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ವುಡ್ಸ್ ಅಧ್ಯಕ್ಷ ರೊ.ವಸಂತ್ ಕುಮಾರ್ ಮಾತನಾಡಿ, ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರಿನ ಯೋಜನೆ, ಪರಿಸರ ಸಂರಕ್ಷಣೆ ಮುಂತಾದ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಮಾನವ ಸೇವೆಯೇ ಮಾಧವ ಸೇವೆ ಎಂಬಂತೆ, ಆಶ್ರಮದಲ್ಲಿ ಮಾನವೀಯತೆ ಜತೆಗೆ ನೊಂದವರಿಗೆ ಆಸರೆಯಾಗಿ ನಿರಂತರ ಸೇವೆ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.


ರೋಟರಿ ಸಲಹೆಗಾರ ರೊ. ಅನಂತ ಶಯನ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನೊಂದವರಿಗೆ ಬೆಳಕಾಗಿ ಸೇವೆ ನೀಡುತ್ತಿರುವ ತನಾಲ್ ಆಶ್ರಮದ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.


ರೊ.ದೇವಣಿರ ತಿಲಕ್ ಮಾತನಾಡಿ, ರೋಟರಿ ವುಡ್ಸ್ ನೊಂದವರ ಬಾಳಿಗೆ ಆಸರೆಯಾಗುವುದರ ಮೂಲಕ, ಅವರ ಜೀವನದಲ್ಲಿ ಭರವಸೆಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ಅತಿಥಿಗಳು ಗಾಲಿ ಕುರ್ಚಿಯನ್ನು ಹಸ್ತಾಂತರಿಸಿದರು. ಇದೇ ಸಂಧರ್ಭದಲ್ಲಿ ಆಶ್ರಮದ ಸಂಸ್ಥಾಪಕ ಮಹಮ್ಮದ್‌ರವರನ್ನು ವುಡ್ಸ್ ವತಿಯಿಂದ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ರೋಟರಿಯನ್‌ಗಳಾದ ಪ್ರಮೀಳಾ ಶೆಟ್ಟಿ, ಬಿ.ಜಿ.ಅನಂತ ಶಯನ, ಮತ್ತು ರವಿಕುಮಾರ್‌ರವರುಗಳು ತಮ್ಮ ಮಧುರವಾದ ಹಾಡುಗಳೊಂದಿಗೆ ನೆರೆದವರನ್ನು ರಂಜಿಸಿದರು.


ಕಾರ್ಯಕ್ರಮದಲ್ಲಿ ರೋಟರಿಯನ್‌ಗಳಾದ ಲೀಲಾವತಿ, ಧನಂಜಯ ಶಾಸ್ತ್ರಿ, ಝಹೀರ್ ಅಹ್ಮದ್, ಕಿರಣ್ ಕುಂದರ್, ಗೀತಾ ಸೂರ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net