ಭಕ್ತರಿಗೆ ಸಂಘ, ಸಂಸ್ಥೆಗಳಿಂದ ಅನ್ನಸಂತರ್ಪಣೆ

22NGD7
ನಂಜನಗೂಡಿನಲ್ಲಿ ದೊಡ್ಡಜಾತ್ರೆ ಅಂಗವಾಗಿ ಗೌತಮ ರಥವನ್ನು ಶಾಸಕ ದರ್ಶನ್ ಧ್ರುವನಾರಾಯಣ ಎಳೆಯುವ ಮೂಲಕ ಗಮನ ಸೆಳೆದರು.
Published on

ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚ ಮಹಾರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಶುಕ್ರವಾರ ವಿವಿಧ ಸೇವಾ ಸಂಘ, ಸಂಸ್ಥೆ ಹಾಗೂ ಸೇವಾರ್ಥದಾರರು ಅನ್ನಸಂತರ್ಪಣೆ, ಪ್ರಸಾದ, ತಂಪು ಪಾನೀಯ ವಿತರಿಸಿದರು.

ದೇವಾಲಯ ಆವರಣ, ರಥಬೀದಿ, ರಾಷ್ಟ್ರಪತಿ ರಸ್ತೆ, ಬಜಾರ್ ರಸ್ತೆ, ಎಂಜಿಎಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ಎಲ್ಲ ರಸ್ತೆಗಳಲ್ಲೂ ಸೇವಾ ಸಂಸ್ಥೆಗಳ ಸ್ವಯಂ ಸೇವಕರು ಉಪಾಹಾರ, ಹಣ್ಣುಹಂಪಲು, ಶುದ್ಧ ಕುಡಿಯುವ ನೀರು, ಐಸ್‌ಕ್ರೀಮ್, ಜ್ಯೂಸ್, ಮಜ್ಜಿಗೆ, ಪಾನಕ ನೀಡಿದರು.

ಒಂದೆಡೆ ರಥಬೀದಿಯಲ್ಲಿ ಪಂಚ ರಥಗಳು ಸಂಚರಿಸುತ್ತಿದರೆ, ಮತ್ತೊಂದೆಡೆ ಆಯಕಟ್ಟಿನ ಜಾಗಗಳಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ರಥಗಳನ್ನು ಎಳೆದು ಬಸವಳಿದಿದ್ದ ಭಕ್ತರು ಹಸಿವು ನೀಗಿಸಿಕೊಳ್ಳಲು ಪ್ರಸಾದ ಕೇಂದ್ರಗಳತ್ತ ಮೊರೆ ಹೋದರು. ಅನೇಕ ಕಡೆ ನೂಕುನುಗ್ಗಲು ಉಂಟಾಯಿತು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದ ವತಿಯಿಂದ ನಾಲ್ಕು ಕಡೆ ಪ್ರಸಾದ ಕೌಂಟರ್ ತೆರೆದು ಸಿಹಿಖಾದ್ಯ ಹಾಗೂ ಉಪಾಹಾರ ವಿತರಿಸಲಾಯಿತು. 35 ಸಾವಿರ ಡ್ರೈಫ್ರೂಟ್ ಬರ್ಫಿ ವಿತರಿಸಲಾಯಿತು. ಇನ್ನು ರಾಷ್ಟ್ರಪತಿ ರಸ್ತೆಯ 13ನೇ ಕ್ರಾಸ್‌ನಲ್ಲಿರುವ ವಿನಾಯಕ ಮಿತ್ರ ಮಂಡಳಿ, ಶ್ರೀ ರಾಘವೇಂದ್ರಸ್ವಾಮಿ ಮಠದ ಎದುರು ಬ್ರಾಹ್ಮಣರ ಯುವ ಸೇವಾ ಸಮಿತಿ, ನೆಸ್ಲೆ ನೌಕರರ ಸಂಘದಿಂದ ಪ್ರಸಾದ ವಿತರಣೆ ನಡೆಯಿತು.

ಪುಣ್ಯಸ್ನಾನ: ರಥೋತ್ಸವ ಮುಗಿಯುತ್ತಿದ್ದಂತೆ ಜನಸಂದಣಿ ನಡುವೆಯೂ ದೇವಾಲಯ ಸುತ್ತಲಿನ ಆವರಣದಲ್ಲಿ ಉರುಳು ಸೇವೆ ನಡೆಯಿತು. ಕಪಿಲಾ ಸ್ನಾನಘಟ್ಟದಲ್ಲಿ ಮಹಿಳೆಯರು, ಮಕ್ಕಳಾದಿಯಾಗಿ ಸಹಸ್ರಾರು ಭಕ್ತರು ಪುಣ್ಯಸ್ನಾನ ಮಾಡಲು ಮುಗಿಬಿದ್ದರು. ಧೂಪದಾರತಿ ಸೇವೆ ಸಲ್ಲಿಸುವಲ್ಲಿ ಭಕ್ತರು ನಿರತರಾಗಿದ್ದರು. ದೇಗುಲದ ದರ್ಶನಕ್ಕೂ ಭಕ್ತರು ಕಿಕ್ಕಿರಿದು ನಿಂತಿದ್ದರು. ರಥೋತ್ಸವ ಸಾಗುವ ವೇಳೆ ಭಕ್ತರು ಗೌತಮ ರಥಕ್ಕೆ ನಾನಾ ಬೇಡಿಕೆ ಹಾಗೂ ಹರಕೆಯನ್ನು ಹೊತ್ತು ಹಣ್ಣು-ದವನ ಎಸೆದು ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net