

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಕನಸನ್ನು ಸಮುದಾಯಗಳ ಸಹಭಾಗಿತ್ವದಲ್ಲಿ ಸಾಕಾರಗೊಳಿಸಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಪ್ರದಿಪ್ ಶೆಟ್ಟಿ ಹೇಳಿದರು.
ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಶ್ರೀ 1008 ಆದಿನಾಥ ಸ್ವಾಮಿ ದಿಗಂಬರ ಜೈನ ಮಂದಿರ ಕಾಮಗಾರಿಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ 3 ಲಕ್ಷ ರೂ. ಡಿಡಿಯನ್ನು ಗ್ರಾಮ ಹಿರಿಯರ ಸಮ್ಮುಖದಲ್ಲಿ ದೇವಸ್ಥಾನ ಕಮಿಟಿ ಸದಸ್ಯರಿಗೆ ಇತ್ತೀಚೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ಮೂಲಕ ದೇವಸ್ಥಾನಗಳ ಜೀಣೋರ್ದ್ಧಾರ, ಕೆರೆಗಳ ಅಭಿವೃದ್ಧಿ, ಹಿಂದು ರುದ್ರಭೂಮಿಗಳ ಅಭಿವೃದ್ಧಿ, ನಿರಾಶ್ರಿತರಿಗೆ ವಾತ್ಸಲ್ಯ ಮನೆ ನಿರ್ಮಾಣ, ಸಮುದಾಯ ಭವನಗಳಿಗೆ ಅನುದಾನ, ಹಾಲಿನ ಡೇರಿಗಳಿಗೆ ಸಹಾಯ ಧನ, ಮಾಶಾಸನ, ಹೀಗೆ ಹಲವು ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದರು.
ತಾಲೂಕು ಯೋಜನಾಧಿಕಾರಿ ಮಯೂರ ತೊರಸ್ಕರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕರಿಯಪ್ಪ ಅಮ್ಮಿನಭಾವಿ, ಬಸವರಾಜ್ ಹೊಂಗಲ್, ಸುರೇಶ ಕರಿಗೌಡ್ರು, ಶಾಂತಪ್ಪ ದುಗನಕೇರಿ, ಮಹದೇವಪ್ಪ ನೀರಲಗಿ, ಮುತ್ತುರಾಜ ಕೋಟಿ, ಶಿಲ್ಪಾ, ಸ್ವ ಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಇತರರು ಇದ್ದರು.