ಸುರಳೇಶ್ವರ ಶಾಲೆ ಶಿಕ್ಷಕ ಶ್ರೀಕಾಂತ ಹುಲ್ಮನಿಗೆ ದತ್ತಿ ಪ್ರಶಸ್ತಿ

AKR
Published on

ಅಕ್ಕಿಆಲೂರ: ಸಮೀಪದ ಅರಿಷಿಣಗುಪ್ಪಿ ಗ್ರಾಮದ ಶಿಕ್ಷಕ, ಸಾಹಿತಿ ಶ್ರೀಕಾಂತ ಹುಲ್ಮನಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಶಿಕ್ಷಕ-ಅರಿವಿನ ಅಕ್ಷಯಪಾತ್ರೆ’ ಕೃತಿಗೆ ದತ್ತಿ ಪ್ರಶಸ್ತಿ ದೊರೆತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.

ಶ್ರೀಕಾಂತ ಅವರು, 8 ವರ್ಷ ನರಗುಂದ ಬಿಎಡ್ ಕಾಲೇಜ್​ನಲ್ಲಿ ಉಪನ್ಯಾಸಕರಾಗಿ, 10 ವರ್ಷದಿಂದ ಹಾನಗಲ್ಲ ತಾಲೂಕಿನ ಸುರಳೇಶ್ವರ ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಿ. ಇಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತಂತ್ರಜ್ಞಾನ, ಡಿಎಡ್ ಶಿಕ್ಷಣಕ್ಕೆ ಆಧುನಿಕ ಶಿಕ್ಷಣದ ಒಲವುಗಳು ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಮಾನವ ಹಕ್ಕುಗಳ ಶಿಕ್ಷಣ ಕೃತಿ ರಚಿಸಿದ್ದರು.

ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಕಾಂತ ಅವರ ‘ಶಿಕ್ಷಕ-ಅರಿವಿನ ಅಕ್ಷಯಪಾತ್ರೆ’ ಕೃತಿ ಬಿಡುಗಡೆಗೊಂಡಿತ್ತು. ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ ಸೇರಿ ಅನೇಕರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net