

ಆಲೂರು: ರಕ್ತದಾನ ತುರ್ತು ಮತ್ತು ಅಪಘಾತಕೀಡಾದ ಜೀವಗಳನ್ನು ಉಳಿಸಲು ಸಹಕಾರಿ ಎಂದು ಆಲೂರು ತಾಲೂಕು ರೆಡ್ ಕ್ರಾಸ್ ಸಭಾಪತಿ ಕೆ.ಎನ್.ಕಾಂತರಾಜು ಅಭಿಪ್ರಾಯಪಟ್ಟರು.
ತಾಲೂಕಿನ ರಾಯರ ಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತ ನಿಧಿ ವಿಭಾಗ ಹಾಗೂ ಆಲೂರು ತಾಲೂಕು ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶ್ರೇಷ್ಟದಾನಗಳಲ್ಲಿ ರಕ್ತದಾನ ಕೂಡ ಒಂದಾಗಿದ್ದು, ನಾವು ಹಲವಾರು ವರ್ಷಗಳಿಂದ ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತೇವೆ. ನಾವು ಇಲ್ಲಿಯವರೆಗೆ ಹಾಸನ ಜಿಲ್ಲೆಯಲ್ಲಿ ಇರುವ ಖಾಸಗಿ ರಕ್ತ ನಿಧಿ ಕೇಂದ್ರಗಳಿಗೆ ಮಾಹಿತಿ ನೀಡಿ ರಕ್ತದಾನ ಶಿಬಿರ ಏರ್ಪಡಿಸುತ್ತಿದ್ದೆವು. ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರ ಏರ್ಪಡಿಸಿದ್ದು, ಇನ್ನು ಮುಂದೆ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಸಹಯೋಗದಲ್ಲಿ ಈ ಶಿಬಿರಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ರಾಯರ ಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಾಗರ್ ಮಾತನಾಡಿ, ರಕ್ತದಾನ ಮಾಡುವುದರ ಉದ್ದೇಶ ಇನ್ನೊಂದು ಜೀವವನ್ನು ಉಳಿಸುವುದೇ ಆಗಿದೆ. ಇತ್ತೀಚೇಗೆ ಕಳೆದ 2-3 ತಿಂಗಳ ಹಿಂದೆ ರಾಜ್ಯಾದ್ಯಂತ ಡೆಂೆ ಪ್ರಕರಣಗಳು ಹೆಚ್ಚಾಗಿತ್ತು. ಅದರಲ್ಲಿ ಡೆಂೆ ಪ್ರಕರಣಗಳಲ್ಲಿ ಹಾಸನ ಜಿಲ್ಲೆಯ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದಂತ ಸಂದರ್ಭದಲ್ಲಿ ನಮ್ಮ ಭಾಗದ ಸಾರ್ವಜನಿಕರು ನನಗೆ ಕರೆ ಮಾಡಿ ನಮ್ಮ ಅಪ್ಪ, ಅಮ್ಮ, ಅಕ್ಕ, ತಂಗಿ, ಹೆಂಡತಿ, ಮಕ್ಕಳು ಹೀಗೆ ತಮ್ಮ ಸಂಬಂಧಿಕರು ಡೆಂೆ ಕಾಯಿಲೆ ಬಂದು ಬಿಳಿ ರಕ್ತ ಕಣಗಳು ಕಡಿಮೆಯಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದಯಮಾಡಿ ರಕ್ತದ ವ್ಯವಸ್ಥೆ ಮಾಡಿಕೊಡಿ ಎಂದು ನನ್ನ ಬಳಿ ತಮ್ಮ ನೋವನ್ನು ಹಂಚಿಕೊಂಡ ಉದಾಹರಣೆಗಳಿವೆ. ರಕ್ತ ಕೊಟ್ಟರೆ ನಮ್ಮ ದೇಹದಲ್ಲಿರುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದನ್ನು ಅವರು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು. ಕಾರಣ ಒಬ್ಬ ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 5 ಬಾರಿ ರಕ್ತದಾನ ಮಾಡಬಹುದು ಎಂದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ ಆದ್ದರಿಂದ ಸಾರ್ವಜನಿಕರು ಯಾವುದೇ ಅಂಜಿಕೆ ಇಲ್ಲದೆ, ಭಯವಿಲ್ಲದೆ, ನಿರಾತಂಕವಾಗಿ ರಕ್ತದಾನ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ 37 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ತಾಲೂಕು ರೆಡ್ ಕ್ರಾಸ್ ಕಾರ್ಯದರ್ಶಿ ವೀರಭದ್ರಸ್ವಾಮಿ, ಪದಾಧಿಕಾರಿಗಳಾದ ಶಶಿಧರ್ ಬೆಕ್ಕಡಿ, ರಘು ಧರ್ಮಣ್ಣ, ವೈದ್ಯಕೀಯ ಸಿಬ್ಬಂದಿ ಡಾ. ಪ್ರತೀಕ್, ಆಶ್ವಥ್, ಲೀಲಾವತಿ, ಭಾನುಮತಿ, ಹನುಮಂತ, ಶುಶ್ರೂಷಕಿಯರಾದ ನೀಲಾಂಬಿಕೆ, ಶಿಲ್ಪಾ, ನಾಜಿಮಾ ಇತರರು ಇದ್ದರು.