

ಹೊಳೆಆಲೂರ: ರಕ್ತದಾನದಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ ಹೃದಯಾಘಾತ ಹಾಗೂ ಪಾರ್ಶ್ವವಾಯು ರೋಗ ಬಾರದಂತೆ ತಡೆಯುತ್ತದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಿರಣಕುಮಾರ ಹಿರೇಕೆಂಚನಗೌಡ್ರ ಹೇಳಿದರು.
ವಿಶ್ವ ವೈದ್ಯ ದಿನಾಚರಣೆಯ ಅಂಗವಾಗಿ ಶ್ರೀಶಾರದಾಂಬೆ ಮೆಮೋರಿಯಲ್ ಟ್ರಸ್ಟ್ ಹಾಗೂ ಬಸವೇಶ್ವರ ರಕ್ತ ಕೇಂದ್ರ ಗದಗ ಸಹಯೋಗದಲ್ಲಿ ಬುಧವಾರ ಎಪಿಎಂಸಿಯ ಸಿದ್ದಾರೂಢ ಭವನದಲ್ಲಿ ಏರ್ಪಡಿಸಿದ್ದ ರಕ್ತದಾನ ಹಾಗೂ ಮಹಿಳಾ ಸ್ವ ಸಹಾಯ ಸಂಘದ ಸದಸ್ಯೆಯರಿಗೆ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾತನಾಡಿದರು. ಒಂದು ಬಾರಿ ರಕ್ತದಾನ ಮಾಡಿದರೆ ಮೂರು ಜೀವಿಗಳನ್ನು ಉಳಿಸಬಹುದು. ಹಣಕ್ಕಾಗಿ ರಕ್ತದಾನ ಅಪರಾಧವಾಗಿದ್ದು, ಪರವಾನಗಿ ಹೊಂದಿದ ರಕ್ತನಿಧಿ ಕೇಂದ್ರಗಳಲ್ಲಿ ಮಾತ್ರ ರಕ್ತದಾನ ಮಾಡಬೇಕು ಎಂದರು.
ಪಿಡಿಒ ಬಸವರಾಜ ಗಿರಿತಮ್ಮನ್ನವರ ಉದ್ಘಾಟಿಸಿದರು. ಶ್ರೀ ಯಚ್ಚರೇಶ್ವರ ಸ್ವಾಮೀಜಿ ಸಾನ್ನಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷೆ ಸುಮಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಿ.ಕೆ. ಸುರಕೋಡ, ವರ್ತಕ ಸುನೀಲಕುಮಾರ ಗೌರಿಮಠ, ಶರಣಯ್ಯ ಹಿರೇಮಠ, ಗಂಗೋತ್ರಿ ಸಂಘದ ಕಾರ್ಯದರ್ಶಿ ವಿನುತಾ ಕುರಡಗಿ, ಬಸವೇಶ್ವರ ರಕ್ತ ಕೇಂದ್ರದ ಅನೀಲಕುಮಾರ ಹಂದ್ರಾಳ, ಮಹಾಕೂಟಯ್ಯ ಹಿರೇಮಠ ಇತರರು ಇದ್ದರು.