

ಮೈಸೂರು: ಹಿಂಜರಿಕೆ ಬಿಟ್ಟು ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಿ ಮತ್ತೊಬ್ಬರ ಜೀವ ಉಳಿಸಲು ನೆರವಾಗಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸಲಹೆ ನೀಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಮೈಸೂರು ಜಿಲ್ಲೆ ಹಾಗೂ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ವತಿಯಿಂದ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಜೀವ ಬಹಳ ಅಮೂಲ್ಯವಾದುದು. ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗೆ ಒಂದು ಬಾಟಲ್ ರಕ್ತ ನೀಡಿದರೆ ಅವನು ಬದುಕುತ್ತಾನೆ. ಆರೋಗ್ಯವಂತರಾಗಿರುವ ವ್ಯಕ್ತಿ ಎರಡು ವರ್ಷಕ್ಕೆ ಒಮ್ಮೆಯಾದರೂ ರಕ್ತವನ್ನು ದಾನ ಮಾಡಬೇಕು. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಮೈಸೂರಿನಲ್ಲಿ ಅನೇಕ ಬ್ಲಡ್ ಬ್ಯಾಂಕ್ ಕೇಂದ್ರಗಳಿದ್ದು ರಕ್ತವನ್ನು ಸಂಗ್ರಹಿಸಿ ಅವಶ್ಯಕತೆ ಇರುವ ರೋಗಿಗಳಿಗೆ ನೀಡುವ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಕ್ತವನ್ನು ಸ್ವಯಂ ಪ್ರೇರಿತವಾಗಿ ನೀಡಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರೋತ್ಸಾಹ ನೀಡಬೇಕು, ಮಾಜಿ ಸೈನಿಕರ ಜಿಲ್ಲಾ ಸಂಘ ಮತ್ತು ರೋಟರಿ ಹೆರಿಟೇಜ್ ಮೈಸೂರು ಪ್ರತಿ ವರ್ಷ ಆರೋಗ್ಯ ತಪಾಸಣೆ ಜತೆಗೆ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ರೋಟರಿ ಹೆರಿಟೇಜ್ ಅಧ್ಯಕ್ಷ ಆರ್. ರಾಜೇಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ. ದಿವಾಕರ್, ಕಾರ್ಯದರ್ಶಿಗಳಾದ ಗೌರವ್ ಜಿ. ಶರ್ಮ, ಎಸ್ ನಟರಾಜು, ಉಪಾಧ್ಯಕ್ಷ ನೀಲಕಂಠಕುಮಾರ ಶೆಟ್ಟಿ ಇತರರು ಇದ್ದರು. ರೋಟರಿ ಹೆರಿಟೇಜ್ ಅಧ್ಯಕ್ಷ ಆರ್ ರಾಜೇಶ್ 50ನೇ ಬಾರಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.