ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ

IMG-20240804-WA0057
Published on

ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಪ್ರಾಪ್ತಿ
ತಿ.ನರಸೀಪುರ: ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನವಾಗಿದ್ದು, ಅಮೂಲ್ಯವಾದ ಜೀವವನ್ನು ಉಳಿಸಲು ರಕ್ತದಾನವನ್ನು ಪ್ರತಿಯೊಬ್ಬರೂ ಮಾಡಬೇಕು. ಮತ್ತೊಬ್ಬರ ಪ್ರಾಣ ಉಳಿಸಿದ ಪುಣ್ಯ ರಕ್ತದಾನ ಮಾಡಿದವರಿಗೆ ಪ್ರಾಪ್ತಿಯಾಗುತ್ತದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎಚ್.ಹನುಮಂತು ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ತಾಲೂಕು ವಕೀಲ ಸಂಘದಲ್ಲಿ ಶನಿವಾರ ವಕೀಲರ ಸಂಘ ಹಾಗೂ ಮೈಸೂರಿನ ಕೆ.ಆರ್. ಆಸ್ಪತ್ರೆಯ ರಕ್ತ ಸಂಗ್ರಹ ಕೇಂದ್ರ ಸಹಾಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನವನ್ನು ಯಾರ ಒತ್ತಡಕ್ಕೆ ಮಣಿದು ಮಾಡಬಾರದು. ಮತ್ತೊಂದು ಜೀವವನ್ನು ಉಳಿಸುವ ಕಾಳಜಿಯಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ರಕ್ತದಾನ ಮಾಡಿದ 6 ಗಂಟೆಗಳಲ್ಲಿ ರಕ್ತಚಲನೆ ಸರಿಹೋಗುತ್ತದೆ. ಆದ್ದರಿಂದ ಯಾರೊಬ್ಬರೂ ಕೂಡ ರಕ್ತದಾನ ಮಾಡುವ ಬಗ್ಗೆ ಭಯಪಡುವ ಅಗತ್ಯವಿಲ್ಲವೆಂದು ತಿಳಿಸಿದರು.


ಶಿಬಿರದಲ್ಲಿ ನ್ಯಾಯಾಧೀಶ ಹನುಮಂತು, ವೆಂಕಟೇಶ್ ಸೇರಿದಂತೆ ಹಲವು ವಕೀಲರು ರಕ್ತದಾನ ಮಾಡಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ಶ್ಯಾಮ್‌ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಉಪಾಧ್ಯಕ್ಷ ಶಾಂತನಾಗರಾಜು. ಕಾರ್ಯದರ್ಶಿ ತುಂಬಲ ಸೋಮಣ್ಣ, ಸಹ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಸೋಸಲೆ ಮಹದೇವಸ್ವಾಮಿ, ವಕೀಲರಾದ ಮಾದಪ್ಪ, ನಾಗಭೂಷಣ್, ಸಿದ್ದಪ್ಪಾಜಿ, ಅಣ್ಣೇಗೌಡ, ಜ್ಞಾನೇಂದ್ರಮೂರ್ತಿ, ಕಿರಣ್, ಉದಯಕುಮಾರ್ ಹಾಗೂ ನ್ಯಾಯಲಯದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net