

ಹಿರೇಕೆರೂರ: ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ತಪ್ಪದೆ ರಕ್ತದಾನ ಮಾಡಬೇಕು. ಇದರಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳ ಜೀವ ಉಳಿಸಬಹುದಾಗಿದೆ ಎಂದು ಪಟ್ಟಣದ ಎಲ್ಐಸಿ ಉಪಕಚೇರಿ ಶಾಖಾ ವ್ಯವಸ್ಥಾಪಕ ಎನ್. ಕೃಷ್ಣಪ್ಪ ಹೇಳಿದರು.
ಭಾರತೀಯ ಜೀವಾ ವಿಮಾ ನಿಗಮದ (ಎಲ್ಐಸಿ) 68ನೇ ವಿಮಾ ಸಪ್ತಾಹದ ನಿಮಿತ್ತ ಪಟ್ಟಣದ ಎಲ್ಐಸಿ ಉಪವಿಭಾಗದ ಕಚೇರಿಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಸಂಪಾದನೆ ಆಗುತ್ತದೆ. ಜತೆಗೆ ರೋಗಿಗಳಿಗೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಅತ್ಯವಶ್ಯವಾಗಿ ಬೇಕಾದ ರಕ್ತ ನೀಡಿದ ಪುಣ್ಯ ಲಭಿಸುತ್ತದೆ. ಅವರ ಜೀವ ಕಾಪಾಡಿದ ಆತ್ಮತೃಪ್ತಿ ನಮಗೆ ದೊರಕುತ್ತದೆ ಎಂದರು.
ಎಲ್ಐಸಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಕೊಟ್ರೇಶ ಮಾತನಾಡಿ, ರಕ್ತದಾನ ಮಾಡುವವರ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ, ಆರೋಗ್ಯಯುತ ಜೀವನ ನಡೆಸಬಹುದು. ಪ್ರತಿಯೊಬ್ಬರೂ ತಮ್ಮ ಜೀವನದ ಭದ್ರತೆಗಾಗಿ ತಪ್ಪದೆ ಎಲ್ಐಸಿ ಜೀವವಿಮೆ ಮಾಡಿಸಿಕೊಂಡರೆ ಕುಟುಂಬದ ಆರ್ಥಿಕ ನಿರ್ವಹಣೆ ಬಹಳ ಸರಳವಾಗುತ್ತದೆ ಎಂದರು.
ಜಿಲ್ಲಾಸ್ಪತ್ರೆ ವೈದ್ಯ ಬಸವರಾಜ ತಳವಾರ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ರಾವಲ್, ಏಜೆಂಟರಾದ ಹರೀಶ ಸುತ್ತಕೋಟಿ, ಬಸವರಾಜ ಅರಕೇರಿ, ತಿಮ್ಮೇಗೌಡ ಪ್ಯಾಟಿ, ಯೋಗೀಶ ಮುಚುಡಿ, ಗದಿಗೆಪ್ಪ ಗುಡಿಹಿಂದ್ಲರ, ಬೂದೆಪ್ಪ ಗುಬ್ಬಿ, ರಮೇಶ ಯಡಂಗಳಿ, ಪರಮೇಶ ಕಾಯಕದ, ವನಿತಾ ಮಳಿಮಠ, ಸಂದೀಪ ಪಾಟೀಲ, ಗಿರೀಶ ಕುಬಸದ, ಬಿ.ಎಸ್. ಕರಡಿ, ಅಣ್ಣಪ್ಪಸ್ವಾಮಿ, ಆನಂದ ಮುರಗೋಡ, ಇತರರಿದ್ದರು. ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಇದರಲ್ಲಿ 26 ಜನ ರಕ್ತದಾನ ಮಾಡಿದರು.