

ಕುರುಗೋಡು: ರಕ್ತದಾನ ಜೀವ ಉಳಿಸುವ ಕಾಯಕವಾಗಿದ್ದು, ತಪ್ಪು ತಿಳಿವಳಿಕೆಗೆ ಕಿವಿಗೊಡದೆ ರಕ್ತದಾನ ಮಾಡಬೇಕು. ಈ ಮೂಲಕ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಮುಸ್ಲಿಂ ಸಮುದಾಯದ ಪ್ರಮುಖ ಖಾದರ್ ಬಾಷಾ ಹೇಳಿದರು.
ಶ್ರೀ ಸುಂಕ್ರಮ್ಮ ದೇವಸ್ಥಾನ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ತ ಸುರಕ್ಷತೆ ಘಟಕ, ಸ್ವಾಮಿ ವಿವೇಕಾನಂದ ರಕ್ತ ನಿಧಿ ಭಂಡಾರ ಹಾಗೂ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನ ಶ್ರೇಷ್ಠವಾಗಿದ್ದು, ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ವೇಳೆ ಸಕಾಲಕ್ಕೆ ರಕ್ತ ದೊರೆಯದೆ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದರು. ಶಿಬಿರದಲ್ಲಿ 80 ಜನ ರಕ್ತದಾನ ಮಾಡಿದರು.