

ಭದ್ರಾವತಿ: ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಿದ ಪುಣ್ಯ ಸಿಗುತ್ತದೆ ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿಭಾಗದ ಅಽಕಾರಿ ಡಾ. ಶಿವಮೂರ್ತಿ ಹೇಳಿದರು.
ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ಪತ್ತಿನ ಸೌಹಾರ್ದ ಸಹಕಾರ ಸಂಘ ಹಳೇನಗರದ ಶ್ರೀ ಸಂಚಿಯ ಹೊನ್ನಮ್ಮ ಬಾಲಕಿಯರ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ರಕ್ತದಾನ ಮಾಡಿದರೆ ದೇಹದ ಶಕ್ತಿ ಕುಂದುತ್ತದೆ. ಇದರಿಂದ ದುಡಿಯಲು ಸಾಧ್ಯವಾಗುವುದಿಲ್ಲ ಎಂಬ ತಪ್ಪು ತಿಳಿವಳಿಕೆಯನ್ನು ಕೈಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ರಕ್ತ ಕೊಡಬಹುದು. 6 ತಿಂಗಳಿಗೊಮ್ಮ ರಕ್ತ ನೀಡುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.
ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರ್ಥಿಕವಾಗಿ ಹಿಂದುಳಿದವರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಾಗದೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇದನ್ನು ತಡೆಗಟ್ಟಲು ಛಾಯಾಗ್ರಾಹಕರ ಸಂಘವು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದೆ ಎಂದು ತಿಳಿಸಿದರು. ವೈದ್ಯರಾದ ಡಾ. ಚಂದ್ರಶೇಖರ್, ಡಾ. ಗುರುರಾಜ್, ಕಾಂತರಾಜ್, ಮೊಹಮದ್, ಅರುಣ್, ಮಂಜುನಾಥ್, ಸಂಜೀವರಾವ್ ಸಿಂಧ್ಯಾ, ಕುಮಾರ್, ಶ್ರೀನಿವಾಸ್ ಇತರರಿದ್ದರು.