ರಕ್ತದಾನ ಮಾಡಿ ಜೀವ ಉಳಿಸಿ

1
Published on

ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್​ ಮನವಿ

ವಿಜಯವಾಣಿ ಸುದ್ದಿಜಾಲ ತುಮಕೂರು
ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಬೇರೆಯವರ ಜೀವ ಉಳಿಸಲು ಅವಕಾಶ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್​ ಮನವಿ ಮಾಡಿದರು.


ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾರತೀಯ ರೆಡ್​ಕ್ರಾಸ್​ ಸಂಸ್ಥೆ, ಸರ್ಕಾರಿ ಪಾಲಿಟೆಕ್ನಿಕ್​, ನರ್ಸಿಂಗ್​ ಮತ್ತು ಸರ್ಕಾರಿ ಪ್ಯಾರಾ ಮೆಡಿಕಲ್​ ಕಾಲೇಜು ಹಾಗೂ ಜಿಲ್ಲಾ ಏಡ್ಸ್​ ನಿಯಂತ್ರಣ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರಿಗೂ ರಕ್ತ ಅತ್ಯಮೂಲ್ಯವಾದುದು. ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಇರುತ್ತದೆ. ಹಾಗಾಗಿ 18 ವರ್ಷ ತುಂಬಿದ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು
ಸಲಹೆ ನೀಡಿದರು.

18 ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ಜೀವ ಉಳಿಸಿಕೊಳ್ಳುವ ಜತೆಗೆ ತುರ್ತು ಪರಿಸ್ಥಿತಿಗೆ
ಒಳಗಾಗಿರುವವರ ಪ್ರಾಣ ಉಳಿಸಲು ರಕ್ತದಾನ ಮಾಡಬೇಕು. ಈ ನಿಟ್ಟಿನಲ್ಲಿ ಯಾರೂ ಹಿಂಜರಿಯಬಾರದು ಎಂದು ಹೇಳಿದರು.
ಡಿಎಪಿಸಿಒ ಡಾ.ಆರ್​.ವಿ.ಮೋಹನ್​ದಾಸ್​ ಮಾತನಾಡಿ, 1975ರಲ್ಲಿ ಮೊದಲನೆ ಬಾರಿಗೆ ರಕ್ತದಾನ ದಿನಾಚರಣೆ ಚಾಲ್ತಿಗೆ ಬಂದಿದ್ದು. ಪ್ರತಿ ವರ್ಷ ಅ.1ರಂದು ರಕ್ತದಾನ ದಿನಾಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.


ತುರ್ತು ಸಂದರ್ಭಗಳಲ್ಲಿ ರಕ್ತ ಬೇಕಾಗುತ್ತದೆ. ಆದ್ದರಿಂದ ರಕ್ತದಾನಿಗಳನ್ನು ಉತ್ತೇಜಿಸುವ ಸಲುವಾಗಿ ಈ ಜಾಥಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಎಲ್ಲ ದೀರ್ಘಾವಧಿ ಕಾಯಿಲೆಗಳಿಗೆ ರಕ್ತದ ಅವಶ್ಯಕತೆ ಇದ್ದೇ ಇದೆ. ಕೃತಕವಾಗಿ ರಕ್ತ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಉತ್ತೇಜಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ತಿಳಿಸಿದರು. 18 ವರ್ಷ ತುಂಬಿದ ಎಲ್ಲರೂ ರಕ್ತದಾನ ಮಾಡಿದರೆ ರಕ್ತದ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಏಡ್ಸ್​ ನಿಯಂತ್ರಣ ಘಟಕದ ಕಚೇರಿ ಆವರಣದಿಂದ ಆರಂಭವಾದ ಜಾಥಾವು ಅಶೋಕ ರಸ್ತೆ ಮೂಲಕ ಸಾಗಿ ಜಿಲ್ಲಾಸ್ಪತ್ರೆ ಆವರಣ ತಲುಪಿತು. ಜಾಥಾ ಸಾಗಿದ ಮಾರ್ಗದುದ್ದಕ್ಕೂ ಸ್ವಯಂ ರಕ್ತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಮೇಲ್ವಿಚಾರಕಿ ಮೋಹನಕುಮಾರಿ, ಡಿಎಚ್​ಇಒ ಚಿದಾನಂದ್​, ಚಂದ್ರಪ್ಪ ಸೇರಿದಂತೆ ಸರ್ಕಾರಿ ನರ್ಸಿಂಗ್​ ಹಾಗೂ ಪ್ಯಾರಾ ಮೆಡಿಕಲ್​ ಕಾಲೇಜಿನ ವಿದ್ಯಾರ್ಥಿಗಳು, ಪಾಲಿಟೆಕ್ನಿಕ್​ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net