

ನೆಲಮಂಗಲ: ರಕ್ತದಾನದಿಂದ ಅತ್ಯಮೂಲ್ಯ ಪ್ರಾಣ ರಕ್ಷಿಸಬಹುದಾಗಿದೆ ಎಂದು ಎಂದು ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ ಅಭಿಪ್ರಾಯಪಟ್ಟರು.
ನಗರದ ಪವಾಡ ಶ್ರೀ ಬಸವಣ್ಣದೇವರ ಮಠದ ಸಮುದಾಯ ಭವನದಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥ ಕ್ಷೇತ್ರ ಬಿಜೆಪಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೋಗಿಗಳ ಶಸ್ತ್ರಚಿಕಿತ್ಸೆ, ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚು. ಅಗತ್ಯವಿರುವ ರಕ್ತಮಾದರಿ ಸಿಗದ ಕಾರಣದಿಂದ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ದಾನಿಗಳು ನೀಡುವ ರಕ್ತವನ್ನು ಸಂಗ್ರಹಿಸುವುದರಿಂದ ಅನೇಕರಿಗೆ ಜೀವ ಉಳಿಯಲಿದೆ ಎಂದರು.
ರಕ್ತದಾನದ ಬಗ್ಗೆ ತಪ್ಪುತಿಳಿವಳಿಕೆಯಿಂದ ಭಯಪಡುವ ಅಗತ್ಯವಿಲ್ಲ. ಆರೋಗ್ಯವಂತ ಎಲ್ಲ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನ ಮಾಡಿದ 24 ಗಂಟೆಗಳಲ್ಲಿ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ, ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದೆ. ರಕ್ತದ ಪ್ರಮಾಣ ಪರೀಕ್ಷಿಸಿದ ಬಳಿಕ ವೈದ್ಯರ ಸಲಹೆಯಂತೆ ದಾನ ಮಾಡಬಹುದಾಗಿದೆ ಎಂದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಹೇಮಂತ್‌ಕುಮಾರ್ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದು ಒಂದೆಡೆಯಾದರೆ ಸೋಂಕಿಗೆ ಹೆದರಿ ಜನತೆ ರಕ್ತದಾನ ಮಾಡುತ್ತಿಲ್ಲ. ಇದರಿಂದ ರಕ್ತದ ಕೊರತೆ ಎದುರಾಗಿದ್ದು, ತುರ್ತು ಚಿಕಿತ್ಸೆಗಳ ವೇಳೆ ತೊಂದರೆ ಆಗುತ್ತಿರುವುದನ್ನು ಮನಗಂಡು ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮ ಯೋಧರ ಹೆಸರಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಬಿ.ಹೊಂಬಯ್ಯ, ಎನ್.ಟಿ.ಆನಂದ್, ಪ್ರಧಾನ ಕಾರ್ಯದರ್ಶಿ ನಾಗರಾಜು, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ರಾಮ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೌಮ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವಕೀಲ ರವಿಕುಮಾರ್, ನಗರಸಭೆ ಸದಸ್ಯ ಎನ್.ಗಣೇಶ್, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಪಿ.ಆನಂದ್, ಹಾಲಿ ಸದಸ್ಯ ಎಂ.ಎಸ್.ರಮೇಶ್, ಯುವಮೋರ್ಚಾ ರಾಜ್ಯ ಸಂಚಾಲಕ ಸತೀಶ್, ತಾಲೂಕು ಅಧ್ಯಕ್ಷ ಕೆ.ಪಿ.ಬೃಂಗೀಶ್, ಪ್ರಧಾನ ಕಾರ್ಯದರ್ಶಿ ರಾಮಮೂರ್ತಿ, ನಗರ ಘಟಕ ಅಧ್ಯಕ್ಷ ಪುನೀತ್, ಆರಾಧನಾ ಸಮಿತಿ ಸದಸ್ಯ ಬಾಲಕೃಷ್ಣ, ಮುಖಂಡರಾದ ರಾಮಕೃಷ್ಣಯ್ಯ, ಎಚ್.ಬಿ.ಮಂಜುನಾಥ್, ಆಂಜಿನಮೂರ್ತಿ, ಶಂಕರ್, ರವಿಕುಮಾರ್, ಪ್ರಕಾಶ್, ಎನ್.ಸಿ.ರುದ್ರೇಶ್, ಅನಿತಾ, ಗುಬ್ಬಣ್ಣಸ್ವಾಮಿ, ಆನಂದ್, ಆಂಜಿನಪ್ಪ, ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.