

ಶಿರಹಟ್ಟಿ: ಶಕ್ತರು ಹಾಗೂ ಆರೋಗ್ಯವಂತ ಯುವಕ-ಯವತಿಯರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಇತರರ ಬದುಕಿಗೆ ಬೆಳಕಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ, ಹುಬ್ಬಳ್ಳಿ ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಲಕ್ಷೆ್ಮೕಶ್ವರ ಬಾಲಾಜಿ ಆಸ್ಪತ್ರೆ ಮತ್ತು ವಿಹಾನ ಹಾರ್ಟಕೇರ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ರಕ್ತಕ್ಕೆ ಭಾರಿ ಬೇಡಿಕೆ ಹೆಚ್ಚಾಗುತ್ತಿದೆ. ಸರ್ವ ದಾನಗಳಲ್ಲಿ ಶೇಷ್ಠದಾನ ರಕ್ತದಾನವಾಗಿದೆ. ಮಾನವ ದೇಹದಲ್ಲಿ ರಕ್ತದ ಮಹತ್ವಕ್ಕೆ ಸಮಾನವಾದ ಮತ್ತೊಬ್ಬ ದ್ರವವಿಲ್ಲ. ರಕ್ತದ ಕೊರತೆ ಇದ್ದಾಗ ರಕ್ತವೇ ಅವಶ್ಯಕವಾಗುತ್ತದೆ ಎಂದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ತಿಮ್ಮರೆಡ್ಡಿ ಮರಡ್ಡಿ ಮಾತನಾಡಿ, ಯಾವುದೇ ಕೆಲಸ ಮಾಡಲು ಮೊದಲು ನಾವು ಆರೋಗ್ಯವಂತಾಗಿರಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗಲು ವೈಯಕ್ತಿಕ ಸ್ವಚ್ಛತೆಯತ್ತ ಗಮನ ಹರಿಸಬೇಕು ನಂತರ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಜಾನು ಲಮಾಣಿ, ಶಿವನಗೌಡ ಕಂಠಿಗೌಡ್ರ, ತಾಲೂಕು ಆರೋಗ್ಯಾಧಿಕಾರಿ ಸುಭಾಸ ದೈಗೊಂಡ, ಪ್ರವೀಣಗೌಡ ಪಾಟೀಲ, ಅಣ್ಣಪ್ಪ ರಣತೂರ, ಮೋಹನ ಗುತ್ತೆಮ್ಮನವರ, ಬಿ.ಡಿ. ಪಲ್ಲೇದ, ಮಂಜು ಶಂಕಿನದಾಸರ, ಫಕೀರಪ್ಪ ನರಸಮ್ಮನವರ, ಬಸವರಾಜ ಸಾಲಿ, ಜೀತುಗೌಡ ಪಾಟೀಲ, ಶಂಕರ ಬಾವಿ, ಶಾಂತಪ್ಪ ಬಳ್ಳಾರಿ, ಶಿವಣ್ಣ ಹಾವೇರಿ, ಹುಸೇನಗೌಡ ಪಾಟೀಲ ಇತರರಿದ್ದರು.