

ಮಡಿಕೇರಿ: ರಕ್ತದಾನ ಮಾಡುವುದರ ಮೂಲಕ ಮತ್ತೊಂದು ಜೀವಕ್ಕೆ ಸಹಾಯ ಸೇತುವೆಯಾಗಬೇಕು ಎಂದು ಹರದೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಉಷಾ ಕಿವಿಮಾತು ಹೇಳಿದರು.
ರೋಟರಿ ಮಡಿಕೇರಿ ವುಡ್ಸ್‌ನಿಂದ, ಮಾದಾಪುರದ ಶ್ರೀಮತಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಬಹತ್ ಶಿಬಿರ ಮತ್ತು ಶಾಲಾ ಮಕ್ಕಳಿಗಾಗಿ ರಕ್ತದ ಗುಂಪನ್ನು ಗುರುತಿಸುವ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಕ್ತದ ಬೇಡಿಕೆ ಹೆಚ್ಚಾಗುತ್ತಿದ್ದು ಈ ಸಂದರ್ಭದಲ್ಲಿ ಯುವಜನತೆ ಮುಂದೆ ಬಂದು ರಕ್ತದಾನ ಮಾಡುವುದರ ಮೂಲಕ ಮತ್ತೊಂದು ಜೀವಕ್ಕೆ ಸಹಾಯ ಸೇತುವೆಯಾಗಬೇಕು ಎಂದು ಕೋರಿದರು.
ಕೊಡಗು ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ರಕ್ತದಾನವಾಗಿದೆ. ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡುವುದರೊಂದಿಗೆ ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ರಕ್ತದಾನ ಮತ್ತು ಅದರ ಅವಶ್ಯಕತೆಗಳ ಬಗ್ಗೆ ಮಾತನಾಡಿದ ಮಡಿಕೇರಿ ರಕ್ತನಿಧಿಯ ಅಧಿಕಾರಿ ಡಾ.ಕರುಂಬಯ್ಯ, ಸಮಾಜದಲ್ಲಿ ರಕ್ತದಾನದ ಬಗೆಗಿನ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವೂ ಬಹಳ ಮುಖ್ಯ, ಅರೋಗ್ಯವಂತ ಮಹಿಳೆಯಾಗಿದ್ದರೆ ಪ್ರತೀ ನಾಲ್ಕು ತಿಂಗಳಿಗೊಮ್ಮೆ, ಗಂಡಸರು ಪ್ರತೀ ಮೂರು ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡಬಹುದು. ರೋಟರಿ ಮಡಿಕೇರಿ ವುಡ್ಸ್ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್ ಮಾತನಾಡಿ, ರಕ್ತದಾನದಂತಹ ಸತ್ಕಾರ್ಯವನ್ನು ಆಯೋಜಿಸುವ ಮೂಲಕ ರೋಟರಿ ವುಡ್ಸ್ ಸದಾಕಾಲ ಸೇವೆಯನ್ನು ಮಾಡುವ ಬದ್ಧತೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಅಲ್ಲಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುವ ಯೋಜನೆಯನ್ನು ಹಾಕಿಕೊಂಡಿದೆ ಎಂದರು.
ಶಿಬಿರದಲ್ಲಿ ಶ್ರೀಮತಿ ಡಿ.ಚೆನ್ನಮ್ಮ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸಿ.ಜಿ.ಮಂದಣ್ಣ, ಮಾದಾಪುರ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿಶಾ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಭೋಜಮ್ಮ, ಶ್ರೀವಿನಾಯಕ ಸೇವಾ ಸಮಿತಿ ಅಧ್ಯಕ್ಷ ಚಂದನ್, ಗ್ರಾಮಪಂಚಾಯಿತಿ ಸದಸ್ಯ ರಮೇಶ್, ರೋಟರಿ ವುಡ್ಸ್ ಸದಸ್ಯರಾದ ಪ್ರವೀಣ್, ಕಶ್ಯಪ್ ಮತ್ತು ರೆಡ್ ಕ್ರಾಸ್‌ನ ಸದಸ್ಯ ಉತ್ತಯ್ಯ ಉಪಸ್ಥಿತರಿದ್ದರು.
ಶಿಬಿರದಲ್ಲಿ ೪೫ ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ೨೨೦ ವಿದ್ಯಾರ್ಥಿಗಳ ರಕ್ತದ ಗುಂಪನ್ನು ಗುರುತಿಸಲಾಯಿತು. ರೆಡ್ ಕ್ರಾಸ್ ಜಿಲ್ಲಾ ಘಟಕ, ಚೆನ್ನಮ್ಮಪ್ರೌಢಶಾಲೆ, ವಿನಾಯಕ ಸೇವಾಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾದಾಪುರ ಮತ್ತು ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.