ಅಂಗಾಂಗ ದಾನ ಮಾಡಿ ಮಾನವೀಯತೆ

Mahesh
Published on

ಮೈಸೂರು: ಮಿದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗವನ್ನು ದಾನ ಮಾಡುವ ಮೂಲಕ 8 ಜನರ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
20 ವರ್ಷದ ಮಹೇಶ್ ಅವರೇ ಎಂಟು ಜನರ ಬಾಳಿಗೆ ಬೆಳಕಾದವರು.


ರಸ್ತೆ ಅಪಘಾತದಿಂದ ನಗರದ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹೇಶ್ ಅವರನ್ನು ಅ.13ರಂದು ಗಂಭೀರ ಸ್ಥಿತಿಯಲ್ಲಿ ಅಪೊಲೋ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಯಿತು. ಆರಂಭಿಕ ಸಿಟಿ ಸ್ಕ್ಯಾನ್‌ನಿಂದ ಅವರ ಮಿದುಳು ಕಾಂಡವು ಊದಿಕೊಂಡಿರುವುದು ಪತ್ತೆಯಾಯಿತು. ತಕ್ಷಣ ಅವರನ್ನು ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತು.


ಮಹೇಶ್ ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಯಿತು ಮತ್ತು ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಅ.15ರಂದು ಸಂಜೆ 5.52ಕ್ಕೆ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಖಚಿತಪಡಿಸಿದರು. ಅಂಗಾಂಗ ದಾನ ಮಾಡಲು ಮಹೇಶ್ ಕುಟುಂಬದವರು ಒಪ್ಪಿಗೆ ಸೂಚಿಸಿದರು. ವಿವಿಧ ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಬಳಿಕ ಸರ್ಕಾರಿ ಮಾರ್ಗಸೂಚಿ ಪ್ರಕಾರ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು.


ಹೃದಯ ಕವಾಟಗಳನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ, ಲಿವರ್ ಮತ್ತು ಎಡ ಕಿಡ್ನಿಯನ್ನು ಮೈಸೂರಿನ ಅಪೋಲೋ ಆಸ್ಪತ್ರೆ, ಬಲ ಕಿಡ್ನಿಯನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆ, ಕಾರ್ನಿಯಾಸ್‌ನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾನ ಮಾಡಲಾಯಿತು ಎಂದು ಅಪೊಲೋ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net